ಗೋಕರ್ಣ: ನಂಬಿಕೆ ಎಂಬ ಭಾವ ಜೀವನಕ್ಕೆ ಅಮೃತ ಇದ್ದಂತೆ. ದೇವರು ನಮ್ಮನ್ನು ಕಾಪಾಡುವ ಬದಲು ಅಚಲವಾದ ನಂಬಿಕೆ ಅಥವಾ ಭರವಸೆಯೇ ನಮ್ಮನ್ನು ಕೋಟೆಯಾಗಿ ನಮ್ಮನ್ನು ಕಾಯುತ್ತದೆ. ಆದ್ದರಿಂದ ಎಲ್ಲರೂ ದೇವರು, ಧರ್ಮ, ಗುರುವಿನಲ್ಲಿ, ಒಳಿತಿನಲ್ಲಿ ನಂಬಿಕೆ ಇಟ್ಟುಕೊಳ್ಳೋಣ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಎಂಟನೇ ದಿನವಾದ ಬುಧವಾರ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಬಲವಾದ ನಂಬಿಕೆ ಇದ್ದರೆ ಅದು ಎಂದಿಗೂ ಹುಸಿಯಾಗುವುದಿಲ್ಲ. ಅತ್ಯಂತ ದೃಢವಾದ, ಅಚಲವಾದ ನಂಬಿಕೆ ಎಂಬ ಭಾವವೇ ಎಲ್ಲ ಸಾಧನೆಯನ್ನು ಮಾಡಿಕೊಳ್ಳುತ್ತದೆ. ನಂಬಿಕೆ ಎನ್ನುವುದು ನಮ್ಮನ್ನು ಹಾಗೂ ಭಗವಂತನನ್ನು ಬಂಧಿಸುವ ಭಾವ. ಇದು ಎಲ್ಲ ತರ್ಕ, ವಿಚಾರ, ಪುರಾವೆಗಳ ಸಂಕೋಲೆಯನ್ನು ಮೀರಿದ್ದು ಎಂದು ವಿಶ್ಲೇಷಿಸಿದರು.
ಚಾತುರ್ಮಾಸ್ಯದ ಅಂಗವಾಗಿ ಬುಧವಾರ ಗಣಪತಿ ಪೂಜೆ, ಪುಣ್ಯಾಹ ವಾಚನ, ಕಲಶ ಸ್ಥಾಪನೆ, ನವಗ್ರಹ ಪೂರ್ವಕ ಉಪನಿಷತ್ ಹವನ, ರಾಮತಾರಕ ಹವನ ಮತ್ತು ರುದ್ರಹವನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ವೈಷ್ಣವಿ ಆನಂದ್ ಅವರಿಂದ ಕರ್ನಾಟಕ ಸಂಗೀತ ಗಾಯನ ನಡೆಯಿತು. ವಿದ್ವಾನ್ ಮೈಸೂರು ಎಚ್.ಎನ್.ಭಾಸ್ಕರ್ ವಯಲಿನ್ನಲ್ಲಿ ಮತ್ತು ವಿದ್ವಾನ್ ಪತ್ರಿ ಸತೀಶ್ಕುಮಾರ್ ಅವರು ಮೃದಂಗದಲ್ಲಿ ಸಹಕರಿಸಿದರು.