ಅಂಕೋಲಾ: ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಕಚೇರಿಯಲ್ಲಿ ಸಹಾಯಕ ನಿದೇರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕೃಷ್ಣಮೂರ್ತಿ ಹೆಗಡೆ ಅವರು ಮುಂಡಗೋಡಕ್ಕೆ ವರ್ಗಾವಾದ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು.
ಸನ್ಮಾನ ಸ್ವೀಕರಿಸಿದ ಡಾ. ಕೃಷ್ಣಮೂರ್ತಿ ಹೆಗಡೆ ಅವರು ಮಾತನಾಡಿ, ಇಲ್ಲಿಯ ರೈತರ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎನ್ನುವ ತೃಪ್ತಿ ನನಗೆ ಇದೆ. ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ-ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸುವ ಯೋಜನೆ ಸೇರಿದಂತೆ ಹಲವು ಯೋಜನೆ ನಮ್ಮ ಇಲಾಖೆಯಲ್ಲಿ ಬಂದಿದೆ. ದಯವಿಟ್ಟು ತಾವೆಲ್ಲರೂ ಸದುಪಯೋಗ ಪಡಿದುಕೊಳ್ಳಿ ಎಂದರು.
ಪ್ರಗತಿಪರ ಕೃಷಿಕ ದೇವರಾಯ ನಾಯಕ ಮಾತನಾಡಿ, ಕೃಷ್ಣಮೂರ್ತಿ ಹೆಗಡೆ ಅವರು ಯಾವುದೇ ವೇಳೆಯಲ್ಲಿ ಪೋನ್ ಮೂಲಕ ಜಾನುವಾರುಗಳ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ವಿಚಾರಿಸಿದರೆ ತಕ್ಷಣವೇ ಸಲಹೆ ಸೂಚನೆ ನೀಡುತ್ತಿದ್ದರು. ಇಂತಹ ಅಧಿಕಾರಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಸೇವೆ ನೀಡುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ರೈತರಾದ ರಾಮ ನಾಯಕ ಬಾಸಗೋಡ, ನಾಗೇಶ ಗಾಂವಕರ ಪೂಜಗೇರಿ, ಸಂತೋಷ ಗಾಂವಕರ, ಲಕ್ಷ್ಮಿಕಾಂತ ಬಂಟ ಕೇಣಿ, ಪ್ರಶಾಂತ ನಾಯಕ, ಕೃಷ್ಣಮೂರ್ತಿ ಜಿ. ನಾಯಕ, ಮಂಗು ಗೌಡ, ರಾಜು ನಾಯಕ ವಿನೋದ ಗಾಂವಕರ, ಪ್ರಶಾಂತ ನಾಯಕ ಮತ್ತು ಇಲಾಖೆಯ ಸಿಬ್ಬಂದಿಗಳಾದ ಧನಂಜಯ, ಶ್ಯಾಮ್, ದಿವ್ಯಾ ಮತ್ತು ಜಯಲಕ್ಷ್ಮಿ ಉಪಸ್ಥಿತರಿದ್ದರು.