ಕಾರವಾರ: ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಜು.11 ರಿಂದ ಯಾವುದೇ ತಾಲೂಕಿನಲ್ಲಿ ಪೂರ್ಣವಾಗಿ ಎಲ್ಲಾ ಶಾಲಾ-ಕಾಲೇಜು, ಅಂಗನವಾಡಿ ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿಲ್ಲ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಅವಶ್ಯವೆನಿಸಿದಲ್ಲಿ ಸ್ಥಳೀಯವಾಗಿ ಸ್ಥಳೀಯ ಮಳೆಯ ಪ್ರಮಾಣವನ್ನು ಆದರಿಸಿ ಶಾಲಾ ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವ ಕುರಿತು ಕ್ರಮ ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ತಿಳಿಸಲಾಗಿದೆ.
ಶಾಲೆಗಳ ಸುತ್ತಮುತ್ತ ನೀರು ತುಂಬಿದ್ದು ವಿದ್ಯಾರ್ಥಿಗಳು ನಡೆದು ಬರಲು ಸಾಧ್ಯವೇ ಎಂದು ಪರಿಶೀಲಿಸುವುದು, ಮಕ್ಕಳು ಬರುವ ದಾರಿಯಲ್ಲಿ ತೊರೆ, ತೋಡು, ಕಾಲುವೆ, ಕೆರೆ, ಹೊಳೆಗಳು ಇವೆಯೇ ಎಂದು ಪರಿಶೀಲಿಸುವುದು, ಶಾಲಾ ಕೊಠಡಿಗಳು, ಕಟ್ಟಡದ ಮಾಡು ಭದ್ರವಾಗಿರುವುದನ್ನು ದೃಢಪಡಿಸಿಕೊಂಡು ತರಗತಿಗಳನ್ನು ನಡೆಸುವುದು, ಮಕ್ಕಳು ತುಂಡಾದ ವಿದ್ಯುತ್ ಕಂಬ, ತಂತಿಯ ಸಂಪರ್ಕಕ್ಕೆ ಬರದಂತೆ ಎಚ್ಚರಿಕೆ ವಹಿಸಲು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶ ಪ್ರತಿ ನಕಲಿಸಿದ ಕಿಡಿಗೇಡಿಗಳು: ಜಿಲ್ಲಾಧಿಕಾರಿಗಳ ಈ ಹಿಂದಿನ ಆದೇಶದ ಪ್ರತಿಯನ್ನು ಯಾರೋ ಕಿಡಿಗೇಡಿಗಳು ನಕಲಿಸಿ, ನಾಳೆಯೂ ರಜೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ಕುರಿತು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದು, ನಾಳೆ ಜು.11 ರಂದು ಎಂದಿನಂತೆ ತರಗತಿಗಳು ನಡೆಯಲಿದ್ದು, ಆದೇಶದ ಪ್ರತಿ ನಕಲಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.