ಶಿರಸಿ:ನಗರದ ನಯನ ಸಭಾಂಗಣದಲ್ಲಿ ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರಾವಾಡ ಉತ್ತರ ಹಾಗೂ ನಯನ ಫೌಂಡೇಶನ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕವಿ ಕಾವ್ಯಸಂಗಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ಪಂಚಯ್ಯರಾ ಹಿರೇಮಠ ಕನ್ನಡತನವನ್ನು ಗಟ್ಟಿಗೊಳಿಸುವ ಕೆಲಸ ಸಾಹಿತ್ಯ ಸಂಸ್ಥೆಗಳಿಂದ ಆಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಅಕ್ಷರ ದೀಪ ಫೌಂಡೇಶನ್ ಸ್ಥಾಪನೆಯಾಗಿ ಕೇವಲ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು ನಮ್ಮರಾಜ್ಯದ ಪ್ರಭಾವಳಿಗಳು. ಶಿರಸಿಯಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವುದು ಬಹಳ ಹೆಮ್ಮೆ ಎನ್ನಿಸುತ್ತಿದೆ ಎಂದರು. ಸಾಹಿತ್ಯ ಮತ್ತು ಭಾಷೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕನ್ನಡ ಭಾಷೆ ಶ್ರೀಮಂತ ಭಾಷೆ. ಇಂಗ್ಲೀಷ್ ವ್ಯಾಮೋಹ ದಿಂದ ಕನ್ನಡ ಭಾಷೆಯನ್ನು ಕನ್ನಡಿಗರೆ ಮರೆಯುತ್ತಿದ್ದಾರೆ. ಕನ್ನಡತನವನ್ನು ಯಾವತ್ತೂ ಬಿಟ್ಟುಕೊಡಬಾರದು. ಆಗ ಮಾತ್ರ ಕನ್ನಡ ಭಾಷೆ ಸಾಹಿತ್ಯ ಮೆರೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ನಯನ ಫೌಂಡೇಶನ್ ಟ್ರಸ್ಟಿ ಡಾ. ತನುಶ್ರಿ ಹೆಗಡೆ ಕೇವಲ ಆರೋಗ್ಯ ಕ್ಷೇತ್ರ ಒಂದೇ ಅಲ್ಲದೇ ಕಲೆ, ಸಾಹಿತ್ಯ ಸಂಸ್ಕೃತಿಗೂ ನಯನ ಫೌಂಡೇಶನ್ ಸಹಕರಿಸುತ್ತಿದೆ. ಕಾವ್ಯದಲ್ಲಿ ಸಾಕಷ್ಟು ರೀತಿಯ ವಿಭಿನ್ನತೆಗಳಿದ್ದರೂ ಎಲ್ಲಾ ಕಾವ್ಯಗಳಿಗೂ ತನ್ನದೇ ಆದ ವೈಶಿಷ್ಟತೆ ವಿದೆ ಎಂದು ತಿಳಿಸಿದರು. ಲೇಖಕನಿಗೆ ಓದುಗರೆ ಆಸ್ತಿ ಇದ್ದಂತೆ, ಅಕ್ಷರ ದೀಪ ಫೌಂಡೇಶನ್ ಕವಿ ಮನಸ್ಸುಗಳನ್ನು ಪೋಷಿಸುತ್ತಿದೆ. ಇಂತಹ ಸಂಸ್ಥೆಯ ಜತೆ ನಯನ ಫೌಂಡೇಶನ್ ಕಾರ್ಯಕ್ರಮ ನಡೆಸುತ್ತಿರುವುದು ಸಂತಸ ತಂದಿದೆ ಎಂದರು.
ಅಕ್ಷರ ದೀಪ ಫೌಂಡೇಶನ್ ಅಧ್ಯಕ್ಷ ಪ್ರವೀಣ್ ಕುಮಾರ್ ಕನ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ, 2018ರಲ್ಲಿ ಅಕ್ಷರ ದೀಪ ಫೌಂಡೇಶನ್ ಸ್ಥಾಪನೆಯಾಗಿದೆ. ಸ್ಥಾಪನೆಯಾದಾಗಿನಿಂದ ನಿರಂತರ ಸಾಹಿತ್ಯ ಕಾರ್ಯಕ್ರಮ ನಡೆಸುತ್ತಲೆ ಬಂದಿದ್ದೇವೆ. ರಾಷ್ಟ್ರಮಟ್ಟದ ಕಾರ್ಯಕ್ರಮವನ್ನು ಸಹ ಆಯೋಜನೆ ಮಾಡಿದ್ದೇವೆ.ನಾಲ್ಕು ವರ್ಷಗಳಲ್ಲಿ ಅಕ್ಷರ ದೀಪ ಫೌಂಡೇಶನ್ ಸಾಕಷ್ಟು ಸಾಧನೆ ಮಾಡಿದೆ. ಐದು ಜಿಲ್ಲೆಗಳಲ್ಲಿ ಅಕ್ಷರ ದೀಪ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್ ಸಿದ್ದಪ್ಪ ಕೆ, ತನುಶ್ರೀ ಹೆಗಡೆ, ಶುಭಾ ವಿಷ್ಣು ಸಭಾಹಿತ, ಜ್ಯೋತಿ ಹೆಬ್ಬಾರ್, ಚಂದ್ರಶೇಖರ ಗಾವರವಾಡ, ಸೇರಿ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ ಹಾಗೂ ಕರುನಾಡ ಕೇಸರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಅಕ್ಷರ ದೀಪ ಫೌಂಡೇಶನ್ ಜಿಲ್ಲಾಧ್ಯಕ್ಷೆ ಮೇಘನಾ ಶಿವಾನಂದ ಸ್ವಾಗತಿಸಿದರು.ಜಿಲ್ಲಾ ಉಪಾಧ್ಯಕ್ಷೆ ಭವ್ಯಾ ಹಳೆಯೂರು ನಿರೂಪಿಸಿದರು.ಜಿಲ್ಲಾ ಗೌರವಾಧ್ಯಕ್ಷೆ ಯಶಸ್ವಿನಿ ಮೂರ್ತಿ ನಿರ್ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಸುಜಾತಾ ಹೆಗಡೆ ವಂದಿಸಿದರು.ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಮಾ ಹಡಪದ ಪ್ರಾರ್ಥಿಸಿದರು.