ಶಿರಸಿ: ಉ.ಕ.ಜಿಲ್ಲೆಯ ಕರಾವಳಿ ತಾಲೂಕುಗಳನ್ನು ಸಂಪರ್ಕಿಸುವ ಪ್ರಮುಖ ರಾ.ಹೆಯ (ಹಾವೇರಿ- ಕುಮಟಾ 766ಇ) ಕಾಮಗಾರಿ ಈ ವರ್ಷದ ಮಳೆಗಾಲದ ಪೂರ್ವಕ್ಕೂ ಕೊನೆಗಾಣದೇ ಇರುವ ಸಾಧ್ಯತೆಗಳು ಹೆಚ್ಚು ಎಂಬ ಆತಂಕ ಸಾರ್ವಜನಿಕರಲ್ಲಿ ಬೆಳೆಯತೊಡಗಿದೆ.
ಫೆ.13 ವರೆಗೆ ಜಿಲ್ಲಾಡಳಿತ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿತ್ತು.ಆದರೆ, ಕಾಮಗಾರಿ ಮುಗಿಯದೇ ಪಡೆಯಬೇಕಾದ ಗತಿಯುನ್ನೂ ಪಡೆಯದೇ ಇದ್ದುದರಿಂದ ಮತ್ತೆ ಮುಂದುವರಿಸಬೇಕಾದ ಅನಿವಾರ್ಯತೆ ಉಂಟಾಯಿತು. ಇಷ್ಟಾದರೂ ಎರಡು ವರ್ಷಗಳ ಹಿಂದೆಯೇ ಮುಗಿಯ ಬೇಕಾಗಿದ್ದ ಕಾಮಗಾರಿ ಇನ್ನೂ ಕಾಲವನ್ನು ನುಂಗುತ್ತ ಇರುವದು ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
ಕಳೆದ ಮಳೆಗಾಲದ ನಂತರ ನಿರ್ಮಾಣವಾಗಬೇಕಾದ ಸೇತುವೆಗಳ ಕೆಳಗೆ ನೀರಿನ ಪ್ರವಾಹ ಇದೆ ಎಂಬ ಕಾರಣಕ್ಕೆ ಕಾಮಗಾರಿ ಪ್ರಾರಂಭವಾಗಲೇ ಇಲ್ಲ. ನಂತರ ಪ್ರಾರಂಭವಾಯಿತಾದರೂ ಗತಿ ಪಡೆಯದೇ ನಿಧಾನವಾಯಿತು. ಜಿಲ್ಲಾಧಿಕಾರಿಗಳು ಸಭೆ ಕರೆದು ಕಾಮಗಾರಿಯನ್ನು ಮುಗಿಸುವದು ನಿಮ್ಮ ಕರ್ತವ್ಯ ಎಂಬ ಸೂಚನೆ ನೀಡಿದ್ದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಕೇಂದ್ರದಿಂದ ವಿಳಂಬವಾಗಿಲ್ಲ. ಯೋಜನೆಯನ್ನು ಅನುಷ್ಠಾನದ ಜವಾಬ್ದಾರಿಯನ್ನು ಹೊತ್ತ ರಾಜ್ಯಸರಕಾರ ವಿಳಂಬಕ್ಕೆ ಕಾರಣವಾಗಿದೆ. ಅರಣ್ಯಭೂಮಿ ಹಸ್ತಾಂತರ ಕೆಲವೊಂದೆಡೆ ಆಗಿಲ್ಲ. ಗುತ್ತಿಗೆದಾರ ಕಂಪನಿಯ ಅಧಕಾರಿಗಳಿಗೆ ಸಾರ್ವಜನಿಕ ರಿಗೆ ತೊಂದರೆಯಾಗುವ ರೀತಿಯಲ್ಲಿ ಕಾಮಗಾರಿ ನಡೆದರೆ ನೀವೆ ಜವಾಬ್ದಾರರಾಗುತ್ತೀರಿ ಎಂದು ಸೂಚನೆಯನ್ನು ನೀಡಿದ್ದರು.
ಆದಾಗ್ಯೂ ಈ ವರೆಗೆ ಕೇವಲ ನಾಲ್ಕು ಸೇತುವೆಗಳು ಮಾತ್ರ ಕೊನೆಯ ಹಂತಕ್ಕೆ ಬಂದು ಮುಟ್ಟಿದೆ. ಪ್ರಮುಖ ಬೆಣ್ಣೆಹೊಳೆ ಸೇತುವೆಯ ಒಂದು ಬದಿಗೆ ಮಾತ್ರ ಮೇಲಿನವರೆಗೆ ಬಂದು ಕಾಂಕ್ರೀಟ್ ಸುರಿಯುವ ಕೆಲಸ ನಡೆದಿದೆ ಎನ್ನಲಾಗಿದೆ.
ಇನ್ನುಳಿದ ಸೇತುವೆಗಳು ಮೇಲೆಳಲು ಕಾಲ ಬಂದಿಲ್ಲ. ಸಾರ್ಜನಿಕರು ಈ ಮೊದಲೇ ಕಟುವಾಗಿ ‘ನಮ್ಮನ್ನು ಕಷ್ಟದಲ್ಲಿ ಸಿಲುಕಿಸಿದ್ದೀರಿ’ ಎಂದಿದ್ದರು. ಪ್ರಸ್ತುತ ಲಘು ವಾಹನಗಳು ಸಂಚರಿಸುತ್ತಿವೆ. ರಾಗಿ ಹೊಸಳ್ಳಿಯ ದೇವಿಮನೆಯ ವರೆಗೆ ಸಾರ್ವಜನಿಕ ಬಸ್ ಗಳು ಸಂಚರಿಸುತ್ತಿವೆ. ಕಾಮಗಾರಿ ಮಳೆಗಾಲ ಪೂರ್ವ ದಲ್ಲಿ ಮುಗಿಯದಿದ್ದರೆ ಸಂಚಾರ ಪೂರ್ಣ ಸ್ಥಗಿತಗೊಳ್ಳಲಿದೆ. ಯಾಕೆಂದರೆ ಬದಲಿ ರಸ್ತೆಗಳು ಮಣ್ಣಿನ ರಸ್ತೆಗಳು ಆಗಿದ್ದರಿಂದ ನೀರಿನ ಪ್ರವಾಹಕ್ಕೆ ನಿಲ್ಲದು.
ವಿದ್ಯಾರ್ಥಿಗಳಿಗೆ, ನಿತ್ಯ ಸಂಚರಿಸುವರಿಗೆ ತೊಂದರೆಯಾಗಬಹುದು. ಪ್ರತಿ ನಿತ್ಯ ಉದ್ಯೋಗಕ್ಕಾಗಿ ಕುಮಟಾ ಕಡೆಯಿಂದ ಬರುವವರು ದೇವಿಮನೆ ವರೆಗೆ ಬೈಕ್ನಲ್ಲಿ ಬಂದು ಮುಂದೆ ಬಸ್ ನಲ್ಲಿ ಸದ್ಯ ಬರುತ್ತಿದ್ದಾರೆ. ಅದೂ ಮುಂದೆ ಸಾಧ್ಯವಾಗದು.
ಮಳೆಗಾಲಕ್ಕೆ ಇನ್ನೆರಡು ತಿಂಗಳಿದೆ. ಇದಕ್ಕೂ ಪೂರ್ವ ಈಗಾಗಲೇ ಆಗೀಗ ಮಳೆ ಸುರಿದಿದೆ. ಏರುತ್ತಿರುವ ಸಾಮಾನ್ಯ ಉಷ್ಣಾಂಶವು ಮಳೆಯ ಮುನ್ಸೂಚನೆ ಆಗಿದೆ. ಹವಾಮಾನ ಇಲಾಖೆಯು ಮಳೆ ಆಗೀಗ ಸುರಿಯಬಹುದೆಂಬ ಮುನ್ಸೂಚನೆ ಕೂಡ ನೀಡಿದೆ.
ಕಾಮಗಾರಿ ಸಕಾಲದಲ್ಲಿ ಮುಗಿಯದೇ ಇದ್ದಲ್ಲಿ, ಪರ್ಯಾಯ ರಸ್ತೆಗಳು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹೆಚ್ಚಿನ ಬಸ್ ಗಳು, ಸಾರ್ವಜನಿಕ ವಾಹನಗಳು ಹಾಳಾದ ರಸ್ತೆ ಗಳಲ್ಲಿ ಯಾವ ಮಾರ್ಗದಲ್ಲಿ ಚಲಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಸುರಕ್ಷತೆಯ ಬಗ್ಗೆಯೂ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲ ಎಂದು ಜನರು ಆಪಾದಿಸಿದ್ದಾರೆ.
ಮುಂದೇನು? ಎಂಬ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ. ಅನಿಶ್ಚಿತತೆ ಮುಂದುವರೆದಿದೆ. ಕುಮಟಾ – ಶಿರಸಿ ರಾ.ಹೆ.ಯ ಕಾಮಗಾರಿ ಮುಗಿದು, ಜನ, ವಾಹನ ಸಂಚಾರಕ್ಕೆ ಮಳೆಗಾಲ ಪೂರ್ವ ದಲ್ಲಿ ತೆರೆದು ಕೊಂಡರೆ, ಅದೇ ಸಾಧನೆ !