ಹೊನ್ನಾವರ : ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ಹೊನ್ನಾವರ ಬಿಜೆಪಿ ಮಂಡಳದ ವತಿಯಿಂದ ಟಪ್ಪರ್ ಹಾಲ್ ಸರ್ಕಲ್ ನಲ್ಲಿ ಡಿ.ಕೆ.ಶಿವಕುಮಾರ ಪ್ರತಿಕೃತಿ ದಹಿಸಿ, ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಶರಾವತಿ ಸರ್ಕಲಿನಲ್ಲಿ (ಟಪ್ಪರ್ ಹಾಲ್ ಸರ್ಕಲ್) ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಲಾಲ್ ಬಜೆಟ್ ಮಾಡಿದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಸೇರಿ ವಿಧಾನಸಭೆಯಲ್ಲಿ ವಿರೋಧಿಸಿ ಖಂಡಿಸಿದ್ದೇವೆ. ಮುಖ್ಯಮಂತ್ರಿಯವರು ತಾನೊಬ್ಬ ಅಹಿಂದ ನಾಯಕ ಎಂದು ಬಿಂಬಿಸಿಕೊಂಡು ಚುನಾವಣೆ ಸಮಯದಲ್ಲಿ ಮತವನ್ನು ಪಡೆದಿದ್ದಾರೆ. 2025-26 ನೇ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಿ, ಗುತ್ತಿಗೆದಾರರಿಗೆ 4% ಮೀಸಲಾತಿ ನೀಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಉಳಿದ ಸಮುದಾಯಕ್ಕೆ ಮೀನುಗಾರರು ರೈತರಿಗೆ ಉಪಯುಕ್ತವಾಗುವ ಯಾವ ಯೋಜನೆಯನ್ನು ತಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪ ಸಂಖ್ಯಾರನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದಾರೆ. ಡಿ. ಕೆ. ಶಿವಕುಮಾರರವರು ದೆಹಲಿಯಲ್ಲಿ ಸಂವಿಧಾನ ಬದಲಾಯಿಸಿ ಆದರೂ ಮುಸ್ಲಿಂರಿಗೆ 4% ಮೀಸಲಾತಿ ಕೊಡುತ್ತೇವೆ ಎಂದಿದ್ದಾರೆ. ಹನಿ ಟ್ರ್ಯಾಪ್ ಬಗ್ಗೆ ಮಾತನಾಡಿದ ರಾಜಣ್ಣ ರವರ ಆರೋಪದ ಪ್ರತಿಭಟಿಸಿದ 18 ಶಾಸಕರನ್ನು ಅಮಾನತ್ತು ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರು ಅಧಿವೇಶನದ ಹೆಬ್ಬಾಗಿಲು ಒದ್ದಿದ್ದು ನೋಡಿದ್ದೇವೆ. ಜಮೀರ್ ಅಹ್ಮದ್ ಸ್ಪೀಕರ್ ಮೈಕ್ ಜಗ್ಗಿದ್ದು ನೋಡಿದ್ದೇವೆ. ಅವರ ಮೇಲೆ ಯಾಕೆ ಕ್ರಮವಾಗಿಲ್ಲ. ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ರಾಜೀನಾಮೆ ನೀಡಬೇಕು ಎಂದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ ಕೇವಲ ಒಂದು ಸಮುದಾಯ ಗಮನದಲ್ಲಿ ಇಟ್ಟುಕೊಂಡು ಪುಷ್ಟಿಕರಣ ನೀತಿ ಅನುಸರಿಸುತ್ತಿದ್ದಾರೆ. ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ ತಕ್ಷಣ ರಾಜೀನಾಮೆ ನೀಡಬೇಕು. ತಕ್ಷಣ ರಾಜೀನಾಮೆ ನೀಡಬೇಕು, ಮುಖ್ಯಮಂತ್ರಿಯವರು ಅವರನ್ನು ಸಚಿವ ಸಂಪುಟದಿಂದ ಅಮಾನತ್ತು ಮಾಡಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಚಿವ ಶಿವಾನಂದ ನಾಯ್ಕ, ರಾಜು ಬಂಡಾರಿ, ಪ. ಪಂ. ಅಧ್ಯಕ್ಷ ನಾಗರಾಜ ಭಟ್ಟ, ಉಪಾಧ್ಯಕ್ಷ ಸುರೇಶ ಹೊನ್ನಾವರ, ಶಿವರಾಜ್ ಮೇಸ್ತ, ಮೇಧಾ ನಾಯ್ಕ, ಲೋಕೇಶ್ ಮೇಸ್ತ, ಬಿ. ಟಿ. ನಾಯ್ಕ, ಎಚ್. ಆರ್. ಗಣೇಶ, ಶ್ರೀಕಲಾ ಶಾಸ್ತ್ರೀ ಇನ್ನಿತರರು ಇದ್ದರು.