ಶಿರಸಿ: ಆರೋಗ್ಯಪೂರ್ಣ ಜೀವನಕ್ಕೆ ಫಿಸಿಯೋಥೆರಪಿ ಪೂರಕ ಹಾಗೂ ಒಂದು ನಿತ್ಯ ವಿನೂತನವಾದ ಚಿಕಿತ್ಸಾ ವಿಧಾನವಾಗಿದ್ದು, ಯಾವುದೇ ತೆರನಾದ ಔಷಧಿ, ಮಾತ್ರೆ, ಶಸ್ತ್ರ ಚಿಕಿತ್ಸೆಗಳಿಲ್ಲದೆ ನೋವನ್ನು ಉಪಶಮನಗೊಳಿಸುವುದಾಗಿದೆ ಎಂದು ಅಕ್ಷಯ ಹೆಗಡೆ ಹೇಳಿದರು.
ಅವರು ಮಾರಿಕಾಂಬಾ ನಗರದ ಗಾಯತ್ರಿ ಬಳಗದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ಸುಗಮಗೊಳಿಸುತ್ತದೆ. ಆಬಾಲ ವೃದ್ಧರಾದಿಯಾಗಿ ಎಲ್ಲ ವರ್ಗದವರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ನೋವಿನ ಅಥವಾ ಕಾಯಿಲೆಯ ಮೂಲ ಕಾರಣವನ್ನು ಪತ್ತೆ ಮಾಡಿ ಸೂಕ್ತವಾಗಿ ಪರಿಹರಿಸುವ ಮೂಲಕ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಬಹುದು. ಇಂದು ನಮ್ಮಲ್ಲಿ ದೈಹಿಕ ವ್ಯಾಯಾಮಗಳ ಅಭಾವವೇ ಅನಾರೋಗ್ಯಕ್ಕೆ ಕಾರಣವಾಗಿದೆ. ನೋವು, ಅಶಕ್ತತೆ ಮೆಟ್ಟಿಲುಗಳನ್ನು ಸುಲಭವಾಗಿ ಹತ್ತಲು ಆಗದಿರುವುದು, ಕುಳಿತುಕೊಳ್ಳಲು, ನಿಲ್ಲಲು ಕಷ್ಟವಾಗುವುದು, ಭಾರವನ್ನು ಎತ್ತುವಾಗ, ಬಾಗಿ ಕೆಲಸ ಮಾಡಲಾಗದಿರುವುದು ಇವೆಲ್ಲವುಗಳನ್ನು ಫಿಸಿಯೋಥೆರಪಿಯ ಮೂಲಕ ತಡೆಗಟ್ಟಬಹುದು.
ನರಗಳಲ್ಲಿನ, ಕೈಕಾಲುಗಳಲ್ಲಿಯ ನೋವನ್ನು ಗುಣಪಡಿಸಿಕೊಳ್ಳಬಹುದಾಗಿದೆ, ಶರೀರವನ್ನು ಆರೋಗ್ಯವಂತವಾಗಿ ಮಾಡಿಕೊಳ್ಳಬಹುದಾಗಿದೆ ಎಂಬುದನ್ನು ಪ್ರೊಜೆಕ್ಟರ್ ಸಹಾಯದಿಂದ ಪ್ರಾಯೋಗಿಕವಾಗಿ ಹೇಗೆ ಮಾಡಬೇಕೆಂಬುದನ್ನು ತೋರಿಸಿ,
ವಿವರಣೆ ನೀಡಿ ತಿಳಿಸಿದರು. ಬೆನ್ನು ನೋವು, ಮಂಡಿ ನೋವು ಮರೆವುಗಳನ್ನು ಕೂಡ ಫಿಸಿಯೋಥೆರಪಿ ಮೂಲಕ ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.
ನೆಮ್ಮದಿಯ ಬದುಕಿಗಾಗಿ, ದೇಹದ ರಕ್ಷಣೆಗಾಗಿ, ಸ್ವಚ್ಛತೆ, ಆರೋಗ್ಯಕ್ಕೆ ಮಹತ್ವ ನೀಡಬೇಕು; ಅದಕ್ಕಾಗಿ ಒಂದಿಷ್ಟು ಶಿಸ್ತು, ನಿಯಮಿತ ವ್ಯಾಯಾಮ ಮಾಡಬೇಕು; ದೇಹವನ್ನು ದೇಗುಲದಂತೆ ಆರಾಧಿಸಬೇಕು ಹಾಗೂ ದೇಹ ಮನಸ್ಸುಗಳ ಸಮತೋಲನ ಅಗತ್ಯವೆಂದು ಅವರು ಹೇಳಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡಿ.ಎಸ್. ಹೆಗಡೆ ಮುರೂರು, ಶಂಕರ್ ಹೆಗಡೆ, ರಾಧಾ ಹೆಗಡೆ, ಹುಲೇಕಲ್ ರಾಮ್ ಪೈ, ಇಂದಿರಾ ಬೈಲಕೇರಿ, ಆಶಾ ಹೆಗಡೆ ಮುಂತಾದವರು ಸಂದೇಹಗಳಿಗೆ ಪರಿಹಾರ ಕಂಡುಕೊಂಡರು.
ಪ್ರೊ.ಡಿ.ಎಂ. ಭಟ್ಟ ಕುಳವೆ ಸ್ವಾಗತಿಸಿ, ಉಪನ್ಯಾಸಕಾರರನ್ನು ಪರಿಚಯಿಸಿ, ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು. ಬಳಗದ ಮುಖ್ಯಸ್ಥ ಎಂ. ಎಸ್. ಹೆಗಡೆ ಉಪನ್ಯಾಸಕರನ್ನು ಗೌರವಿಸಿದರು. ಸಮಾರಂಭದಲ್ಲಿ ಸುಬ್ರಾಯ ಮತ್ತಿಹಳ್ಳಿ, ಕೃಷ್ಣವೇಣಿ ಹೆಗಡೆ, ತಾರಾ ಹೆಗಡೆ, ಎಲ್. ಜಿ. ಭಟ್, ಸುರೇಶ್ ಸಂಕೊಳ್ಳಿ, ಕಾಶಿನಾಥ ಹೆಗಡೆ, ಲತಾ ನೇತಲಕರ, ಭಾರತಿ ಹತ್ವಾರ
ಎನ್.ಆರ್.ವೈದ್ಯ, ಲಕ್ಷ್ಮಣ ಶಾನಭಾಗ, ಆರ್.ಎಸ್. ಬೈಲಕೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಎಮ್.ಎಸ್.ಹೆಗಡೆ ವಂದಿಸಿದರು