ಶಿರಸಿ: ಓದಿನೊಂದಿಗೆ ಎನ್ಎಸ್ಎಸ್ ಚಟುವಟಿಕೆ ಮಾಡಿದಾಗ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಜೀವನದಲ್ಲಿ ಹೇಗೆ ಬದುಕಬೇಕೆಂದು ಇಂತಹ ಕಾರ್ಯಕ್ರಮಗಳು ಹೇಳಿಕೊಡುತ್ತದೆ ಎಂದು ಶಿರಸಿಯ ತಾಲೂಕ ಆರೋಗ್ಯಾಧಿಕಾರಿ ಡಾ. ವಿನಾಯಕ್ ಭಟ್ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಪುಟ್ಟನಮನೆ ಗ್ರಾಮದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಎನ್ಎಸ್ಎಸ್ ಶಿಬಿರ ಎನ್ನುವುದು ಮಕ್ಕಳಲ್ಲಿ, ಯುವಕ ಯುವತಿಯರಲ್ಲಿ ಸೇವಾ ಮನೋಭಾವನೆ ಜೊತೆಗೆ ಹಲವಾರು ರೀತಿಯ ಕೌಶಲ್ಯಗಳನ್ನು ಬೆಳೆಸಲು ಸಹಾಯವಾಗಿದೆ. ಎನ್ಎಸ್ಎಸ್ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ನಮ್ಮ ಮುಂದಿನ ಜೀವನದ ಒಳ್ಳೆಯ ಕಾರ್ಯಗಳಿಗೆ ಸಹಾಯಕಾರಿಯಾಗುತ್ತದೆ. ಪ್ರತಿಯೊಂದು ವಿದ್ಯಾರ್ಥಿಯಲ್ಲಿಯೂ ಕೌಶಲ್ಯಾಭಿವೃದ್ಧಿ ಪಡಿಸುವಲ್ಲಿ ಎನ್ಎಸ್ಎಸ್ ಶಿಬಿರ ಸಹಾಯವಾಗುತ್ತದೆ. ಶಿಬಿರದಲ್ಲಿ ಸೇವೆಯ ಜೊತೆಗೆ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳಬೇಕು. ಉಪನ್ಯಾಸ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು. ಇಂತಹ ಉಪನ್ಯಾಸ ಕಾರ್ಯಕ್ರಮಗಳು ಜೀವನದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಹೇಳಿಕೊಡುತ್ತದೆ. ಶಿಬಿರದ ಸದುಪಯೋಗ ಪಡೆದು ಶಿಬಿರದ ಮೂಲ ಉದ್ದೇಶಕ್ಕೆ ನಾವು ಸದಾ ಬದ್ಧರಾಗಿರಬೇಕು ಎಂದರು.
ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿಗಳಾದ ಪ್ರೊ.ಜಿ.ಟಿ.ಭಟ್ ಶಿಬಿರದ ದಿಕ್ಸೂಚಿ ಭಾಷಣ ಮಾಡಿ ಎನ್ಎಸ್ಎಸ್ ಇದು ಕೇವಲ ಸ್ವಚ್ಛತೆಯ ಶಿಬಿರವಲ್ಲ ವ್ಯಕ್ತಿತ್ವ ವಿಕಸನದ ಪಾಠ. ಇಲ್ಲಿ ಪರಸ್ಪರ ಸೌಹಾರ್ದತೆ ಸಹಕಾರ ಶ್ರಮದಾನ ಚಿಂತನ ಮಂಥನಗಳು ನಡೆಯುತ್ತವೆ. ಇದು ದೇಶ ಕಟ್ಟುವ ಕೆಲಸವನ್ನು ಮಾಡುತ್ತವೆ. ಎನ್ಎಸ್ಎಸ್ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ನಮ್ಮ ವ್ಯಕ್ತಿತ್ವ ನಿರ್ಮಿಸಿಕೊಳ್ಳುವ ನಿಸ್ವಾರ್ಥ ಸೇವೆಯಾಗಿದೆ. ಎನ್ಎಸ್ಎಸ್ ಚಿನ್ನೆಯಲ್ಲಿರುವ 8 ಗೆರೆಗಳು 8 ದಿಕ್ಕಿನಲ್ಲಿ ಯಾವಾಗಲೂ ಸೇವೆ ಸಲ್ಲಿಸಲು ಯುವಕರು ಸಿದ್ದರಾಗಿರುತ್ತಾರೆ ಎಂಬುದನ್ನು ಸೂಚಿಸುತ್ತದೆ. ರಾಷ್ಟ್ರ ಕಟ್ಟುವ ಕೆಲಸ ಎಂಬುದು ನಮ್ಮ ನಮ್ಮಲ್ಲಿಯೇ ಅಲ್ಲ ಅಕ್ಕ ಪಕ್ಕದ ಜಿಲ್ಲೆಯವರು ತಾಲೂಕಿನ ಜನರಲ್ಲಿ ಸಹ ಸೇವಾ ಮನೋಭಾವನೆಯನ್ನು ಮೂಡಿಸುವುದು ನಿಜವಾದ ರಾಷ್ಟ್ರ ಕಟ್ಟುವ ಕೆಲಸ. ಕರ್ನಾಟಕದ 1800 ಪದವಿ ಕಾಲೇಜಿನಲ್ಲಿ ಇಂದಿರಾಗಾಂಧಿ ಎನ್ಎಸ್ಎಸ್ ರಾಷ್ಟ್ರೀಯ ಪ್ರಶಸ್ತಿ ಪಡೆದ ಹೆಗ್ಗಳಿಕೆ ಎಂಇಎಸ್ ಮಹಾವಿದ್ಯಾಲಯಕ್ಕೆ ಇದೆ ಎಂದು ನುಡಿದರು.
ಶ್ರೀ ಲಕ್ಷ್ಮೀ ನರಸಿಂಹ ಗ್ರಾಮ ಅಭಿವೃದ್ಧಿ ಸಂಘ ಪುಟ್ಟನಮನೆಯ ಅಧ್ಯಕ್ಷರಾದ ಉಮೇಶ್ ಭಟ್ ಮಾತನಾಡಿ ವಿದ್ಯಾರ್ಥಿಗಳಂತೆ ಊರಿನವರಿಗೂ ಎನ್.ಎಸ್.ಎಸ್. ಶಿಬಿರ ಎಂಬುದು ಭಾಗ್ಯವಾಗಿರುತ್ತದೆ. ಇದರಿಂದ ಊರು ಅಭಿವೃದ್ಧಿ ಪಥದತ್ತ ಸಾಗುತ್ತದೆ. ವಿದ್ಯಾರ್ಥಿಗಳು ಅವರ ವಿದ್ಯಾರ್ಥಿ ಜೀವನದ ಅನೇಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗೂ ಪಾಲಕರಿಗೆ ಎಂದೂ ಆಭಾರಿಯಾಗಿರಬೇಕು. ಇದು ದೇಶ ಸೇವೆಯ ಪಾಠವನ್ನು ಕಲಿಸಿಕೊಡುತ್ತದೆ. ಇದರಿಂದ ದೇಶಕ್ಕೆ ಉತ್ತಮ ಪ್ರಜೆಗಳು ನಿರ್ಮಾಣವಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಂ . ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಉಪ ಸಮಿತಿ ಅಧ್ಯಕ್ಷ ಎಸ್. ಕೆ ಭಾಗವತ್ ಮಾತನಾಡಿ ವಿದ್ಯಾರ್ಥಿಗಳು ಸೇವೆಯ ಜೊತೆ ಊರಿನ ವಿಚಾರಗಳನ್ನು ಕಲಿಯುತ್ತಾರೆ. ಎನ್ಎಸ್ಎಸ್ ಶಿಬಿರದಲ್ಲಿ ಕೆಲಸಕ್ಕಿಂತ ಕಲಿಕೆಗೆ ಹೆಚ್ಚು ಮಹತ್ವವಿದೆ ಈ ಶಿಬಿರ ಮುಂದೆ ನಾವು ಏನು ಸಾಧಿಸಬೇಕು ಎಂಬುವ ಗುರಿಗೆ ಇಲ್ಲಿಂದಲೇ ಮೊಳಕೆ ಚಿಗುರೊಡೆಯುವಂತಾಗಬೇಕು. ಸೇವೆ ಎನ್ನುವ ಶಬ್ದ ಇಂದು ಅರ್ಥವನ್ನು ಕಳೆದುಕೊಂಡಿದೆ ಎಲ್ಲರೂ ತಾನು ಸೇವೆ ಸಲ್ಲಿಸಿದೆ ಎಂದು ಬೀಗುತ್ತಾರೆ. ಆದರೆ ಸೇವೆ ಪ್ರತಿಫಲಾಕ್ಷೆ ಇಲ್ಲದಿರುವುದಾಗಿದೆ. ಆ ರೀತಿಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಾಕ್ಟರ್ ವಿನಾಯಕ್ ಭಟ್ ರವರನ್ನು ಗೌರವಿಸಲಾಯಿತು. ಸಕಿಪ್ರಾ ಶಾಲೆ, ಪುಟ್ಟನ ಮನೆ ಮುಖ್ಯ ಶಿಕ್ಷಕಿ ಕಲ್ಪನಾ ಭಟ್, ಪ್ರೊಫೆಸರ್ ಡಾ. ಕೃಷ್ಣಮೂರ್ತಿ ಭಟ್, ಪ್ರೊಫೆಸರ್ ಡಾ. ಗಣೇಶ್ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುದೀಪ್ ಮಾಳಿ ನಿರೂಪಿಸಿದರು. ಪ್ರೊ. ರಾಘವೇಂದ್ರ ಹೆಗಡೆ ಸ್ವಾಗತಿಸಿ, ಪ್ರೊ. ರವಿಕುಮಾರ್ ಕೊಳೇಕರ್ ವಂದಿಸಿದರು.