ಹೊನ್ನಾವರ: ಕಾನೂನು ಭಾಹಿರವಾಗಿ ಅರಣ್ಯವಾಸಿ ಅತಿಕ್ರಮಿಸಿರುವ ಸಾಗುವಳಿ ಕ್ಷೇತ್ರದಿಂದ ಬಲಪ್ರಯೋಗದಿಂದ ಕಾನೂನು ಪ್ರಕ್ರಿಯೆಯ ಹೊರತಾಗಿ ಬೇಕಾಯ್ದಿರಿಸಿರಾಗಿ ಒಕ್ಕಲೆಬ್ಬಿಸಲು ಬರಲಾರದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಮಾ.೮ ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹೊನ್ನಾವರ ತಾಲೂಕಿನ ಹೆರಂಗಡಿ ಮತ್ತು ಉಪ್ಪೋಣಿ ವಿವಿಧೆಡೆ ಜರುಗಿದ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಜಾಥಾವನ್ನು ಉದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಕ್ಷೇತ್ರದಿಂದ ಅರ್ಜಿಯ ಅಂತಿಮ ವಿಚಾರಣೆ ಜರುಗುವರೆಗೂ ಒಕ್ಕಲೆಬ್ಬಿಸಲು ಬರಲಾಗದು. ಅದಾಗ್ಯೂ ಕಾನೂನು ಮೀರಿ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಪ್ರಸಂಗ ಜರುಗುತ್ತಿರುವದು ವಿಷಾದಕರವೆಂದು ಅವರು ಹೇಳಿದರು.
ಜಾಥದ ನೇತೃತ್ವವನ್ನು ವಿನಾಯಕ ನಾಯ್ಕ ಗ್ರಾಮಪಂಚಾಯತ್ ಸದಸ್ಯ, ಅಬ್ದುಲ್ ಖಾದರ್, ಅರುಣ ನಾಯ್ಕ, ಅಬ್ದುಲ್ ಕಟ್ಟಿಮನೆ, ಸಂಚಾಲಕರಾದ ಮಹೇಶ ನಾಯ್ಕ ಸಾಲ್ಕೋಡ, ಮಂಜು ಮರಾಠಿ, ವಿನೋದ ನಾಯ್ಕ ಎಲ್ಕೋಟಗಿ, ಸಂಕೇತ(ಬೆಂಕಿ), ಸುರೇಶ ತುಂಬೊಳ್ಳಿ, ಜಾನ್ ಓಡ್ತಾ ಮಾಗೋಡ, ಖತೇಜಾಬಿ ಮಹಮ್ಮದ್ ಅಸೀದ್ ಶೇಖ, ನಗರ ಅಧ್ಯಕ್ಷ ಸುರೇಶ ಮೇಸ್ತಾ, ದಾವುದ ಮುಂತಾವರ ನೇತೃತ್ವ ವಹಿಸಿದರು.
ಸಾವಿರಾರು ಕುಟುಂಬದ ಒಕ್ಕಲೆಬ್ಬಿಸುವ ಪ್ರಕ್ರಿಯೆ:
ಅರಣ್ಯ ಇಲಾಖೆಯ ಕಾಯಿದೆ ಅಡಿಯಲ್ಲಿ ಪರವಾನಿಗೆ, ಅನುಮತಿ ಮತ್ತು ಭೂಮಿ ಹಕ್ಕು ಹೊಂದದೆ ಅರಣ್ಯವಾಸಿಗಳು ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿರುವ ಕುಟುಂಬಗಳಿಗೆ ಅರಣ್ಯ ಇಲಾಖೆಯ ಒಕ್ಕಲೇಬ್ಬಿಸುವ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳ ಒಕ್ಕಲೇಬ್ಬಿಸುವ ಪ್ರಕ್ರಿಯೆ ವಿಚಾರಣೆ ಜಿಲ್ಲಾದ್ಯಂತ ಅರಣ್ಯ ಇಲಾಖೆಯ ವಿಚಾರಣೆ ಪ್ರಾಧಿಕಾರದಲ್ಲಿ ಜರುಗುತ್ತಿದೆ.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಒಕ್ಕಲೇಬ್ಬಿಸಲು ಆದೇಶಿಸಲು ಬರಲಾರದೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.