ಯಲ್ಲಾಪುರ: ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಆಲೆಮನೆಗಳು ನಶಿಸಿದೆ. ಆ ಹಿನ್ನೆಲೆಯಲ್ಲಿ ನಮ್ಮ ಗ್ರಾಹಕರ, ಹಿತೈಷಿಗಳ ಆಗ್ರಹದ ಮೇಲೆ ನಾವು ಹಲವು ವರ್ಷಗಳಿಂದ ಆಲೆಮನೆ ಹಬ್ಬವನ್ನು ನಡೆಸುತ್ತಿದ್ದೇವೆ. ಇದರಿಂದ ಪರಸ್ಪರ ಎಲ್ಲ ಗ್ರಾಹಕರ, ಬಾಂಧವರ ಪರಸ್ಪರ ಸಂಬಂಧಕ್ಕೆ ಅನುಕೂಲವಾಗಿದೆ ಎಂದು ಟಿ.ಎಂ.ಎಸ್. ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು, ಫೆ.೧೨ ರಂದು ಟಿ.ಎಂ.ಎಸ್. ಸುಪರ್ ಮಾರ್ಟ್ ಆವಾರದಲ್ಲಿ ಆಲೆಮನೆ ಹಬ್ಬದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.
ಎಲ್ಲೆಡೆ ಇಂತಹ ಆಲೆಮನೆ ಹಬ್ಬ ಸೇರಿದಂತೆ ಸಾಮಾಜಿಕವಾಗಿ ಜನ ಸೇರುವ ವ್ಯವಸ್ಥೆಯನ್ನು ರೂಪಿಸುತ್ತಿರುವುದು ನಮ್ಮೆಲ್ಲ ಗ್ರಾಹಕರಿಗೆ ಒಂದು ಸವಿಯನ್ನು ನೀಡುವ ಉದ್ದೇಶವನ್ನು ಹೊಂದಿದ್ದೇವೆ. ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಕೇವಲ ಅಡಿಕೆ ವ್ಯವಹಾರಸ್ಥರು ಮಾತ್ರ ಬರುವ ಅವಕಾಶವಿದೆ. ಇಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ದೀಪ ಬೆಳಗಿಸಿ, ಮಾತನಾಡಿ, ಹಿಂದೆ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆ ಇರುತ್ತಿದ್ದ ಕಾರಣ ಎಲ್ಲೆಡೆ ಬೇರೆ ಬೇರೆ ರೀತಿಯ ನಮ್ಮ ಧಾರ್ಮಿಕ ಹಬ್ಬಗಳು ಸಮಸ್ಥ ಕುಟುಂಬ ಸೇರಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದರು. ಇಂದು ಕುಟುಂಬ ವ್ಯವಸ್ಥೆ ಶಿಥಿಲಗೊಂಡಿದೆ. ಆ ದೃಷ್ಟಿಯಿಂದ ಇಂತಹ ಸಂಘ-ಸಂಸ್ಥೆಗಳು ವಿಶಿಷ್ಠ ಕಾರ್ಯಕ್ರಮ ನಡೆಸುವುದು ಒಂದು ಉತ್ತಮ ನಡೆ ಎಂದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಟಿ.ಎಂ.ಎಸ್. ಒಂದು ಹೆಮ್ಮೆಯ ಸಂಸ್ಥೆ. ರೈತರ ಬೆನ್ನೆಲುಬಾಗಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇಂದು ಉತ್ತಮ ಸ್ಥಿತಿಯನ್ನು ಈ ಸಂಸ್ಥೆ ತಲುಪಿದೆ ಎಂದರು.
ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸಹಾಯಕ ವಿ.ಟಿ.ಹೆಗಡೆ ಸ್ವಾಗತಿಸಿ, ನಿರ್ವಹಿಸಿದರು. ಉಪಾಧ್ಯಕ್ಷ ನರಸಿಂಹ ಕೋಣೇಮನೆ ವಂದಿಸಿದರು. ನಂತರ ಬಂದ ಎಲ್ಲರಿಗೂ ಉಚಿತವಾಗಿ ಕಬ್ಬಿನಹಾಲು ಮತ್ತು ಮಂಡಕ್ಕಿ ವಿತರಿಸಲಾಯಿತು. ಅಲ್ಲದೇ, ಸುಮಾರು ೪ ಗಂಟೆಗಳ ಕಾಲ ರಸಮಂಜರಿ ಕಾರ್ಯಕ್ರಮ ನಡೆಯಿತು.