ಹೊನ್ನಾವರ : ತಾಲೂಕಿನ ಶರಾವತಿ ಸೇತುವೆಯ ಮೇಲೆ ಆಗುತ್ತಿರುವ ಅಪಘಾತ ಬಗ್ಗೆ ಮತ್ತು ಹಳೆಯ ಸೇತುವೆಯ ಮೇಲೆ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯವಾದಿ ವಿಕ್ರಂ ನಾಯ್ಕ ನೇತೃತ್ವದಲ್ಲಿ ಗುರುವಾರ ಎನ್ಎಚ್ಎಐ ಕಚೇರಿಗೆ ತೆರಳಿ ಮನವಿ ನೀಡಿದ್ದಾರೆ.
ಶರಾವತಿ ಸೇತುವೆ ಮೇಲೆ ಕಳೆದ ಒಂದು ತಿಂಗಳಲ್ಲಿ 10 ಕ್ಕೂ ಹೆಚ್ಚು ಅಪಘಾತ ಸಂಭವಿಸಿದ್ದು, ಈಗಾಗಲೇ 5 ಜನ ಮೃತಪಟ್ಟಿರುತ್ತಾರೆ. ಶರಾವತಿ ಸೇತುವೆಯ ದಕ್ಷಿಣ ಬದಿಗೆ ದ್ವಿಮುಖ ರಸ್ತೆ ಏಕ ಮುಖವಾಗಿ ಸೇತುವೆಗೆ ಸೇರುತ್ತಿದ್ದು, అల్లి ಸರಿಯಾದ ನಾಮಫಲಕ ಅಳವಡಿಸಿದ್ದು ಇರುವುದಿಲ್ಲ. ತಿರುವು ಅವೈಜ್ಞಾನಿಕವಾಗಿರುತ್ತದೆ. ಶರಾವತಿ ಹಳೆ ಸೇತುವೆ ವಾಹನಗಳ ಓಡಾಟಕ್ಕೆ ನಿರ್ಬಂಧಿಸಲಾಗಿದ್ದು, ಸೇತುವೆಯ ಮೇಲೆ ಲಘುವಾಹನ ಓಡಾಡಲು ವ್ಯವಸ್ಥೆ ಮಾಡಿದರೆ ಅಪಘಾತ ಸಂಭವಿಸುವುದನ್ನು ತಪ್ಪಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿರುತ್ತದೆ.
ಶರಾವತಿ ಸೇತುವೆಗೆ ಸಂಬಂಧ ಪಟ್ಟ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಒಂದುವಾರದೊಳಗೆ ಸೂಕ್ತ ಕ್ರಮ ಜರುಗಿಸಬೇಕು. ತಪ್ಪಿದ್ದಲ್ಲಿ, ಸಾರ್ವಜನಿಕರು ಕಾನೂನು ರೀತಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಮೇಸ್ತ, ಸದಸ್ಯ ಸುಭಾಸ್ ಹರಿಜನ್, ಹವ್ಯಕ ಬ್ಯಾಂಕ್ ಅಧ್ಯಕ್ಷ ಸದಾನಂದ ಭಟ್ಟ, ಬೆಳಕೊಂಡ ಮೀನುಗಾರ ಸೊಸೈಟಿ ಅಧ್ಯಕ್ಷ ಉಮೇಶ ಮೇಸ್ತ, ಗಣಪತಿ ಮೇಸ್ತ ಇನ್ನಿತರು ಇದ್ದರು. ಎನ್ಎಚ್ಎಐ ಅಧಿಕಾರಿ ಮನವಿ ಸ್ವೀಕರಿಸಿದರು. ಅದೇ ಸಮಯದಲ್ಲಿ ಭಟ್ಕಳ್ ಡಿವೈಎಸ್ಪಿ ಮಹೇಶ್ ಇದ್ದರು. ಹಳೆಯ ಸೇತುವೆಯ ಮೇಲೆ ಲಘು ವಾಹನ ಸಂಚಾರ ಮಾಡುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕೇವಲ ಲಘು ವಾಹನ ಮಾತ್ರ ಸಂಚಾರ ಮಾಡಲು ಸರಿಯಾದ ಸಿದ್ಧತೆ ಮಾಡಿ ಕೆಲವೇ ದಿನದಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದು ಆ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.