Slide
Slide
Slide
previous arrow
next arrow

ಬ್ಯಾಂಕರ್ಸ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

300x250 AD

ಕಾರವಾರ: ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಗಳಿಗೆ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಮತ್ತು ಗ್ರಾಮೀಣ ಭಾಗದ ಜನರು ನೊಂದಾಯಿಸಿಕೊಳ್ಳಲು ಬ್ಯಾಂಕ್‌ಗಳು ಹೆಚ್ಚಿನ ಆದ್ಯತೆ ನೀಡಿ, ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕರೀಂ ಅಸದಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ) ಮತ್ತು ಜಿಲ್ಲಾ ಪಂಚಾಯತ್ – ಉತ್ತರ ಕನ್ನಡ ಇವರ ಸಹಯೋಗದೊಂದಿಗೆ ಆಯೋಜಿಸಲಾದ ಒಂದು ದಿನದ ಬ್ಯಾಂಕ್‌ರ್ಸ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಮಾತನಾಡಿದರು. ಅನಿರೀಕ್ಷಿತ ಅಪಘಾತಗಳು, ಪ್ರಾಣ ಹಾನಿ, ಶಾಶ್ವತ ಅಂಗ ವೈಫಲ್ಯದ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಪ್ರಾಥಮಿಕ ಆರ್ಥಿಕ ಭದ್ರತೆ ಒದಗಿಸುವಲ್ಲಿ ಸದರಿ ಯೋಜನೆಗಳು ತುಂಬಾ ಸಹಕಾರಿಯಾಗಿವೆ. ಗ್ರಾಮೀಣ ಮಟ್ಟದಲ್ಲಿ ಸ್ವ ಸಹಾಯ ಗುಂಪುಗಳನ್ನು ಪ್ರತಿನಿಧಿಸಿ ಸಂಘದ ಸದಸ್ಯರು ಯೋಜನೆಗಳಿಗೆ ನೋಂದಾಯಿಸಿಕೊಳ್ಳಲು ಬಂದಾಗ ವಿನಾಕಾರಣ ಅವರನ್ನು ಮರಳಿ ಕಳುಹಿಸದೆ ಅಗತ್ಯ ಸಹಕಾರ ನೀಡಿ, ಯೋಜನೆಯಡಿ ಎಲ್ಲರನ್ನೂ ಒಳಪಡಿಸಲು ನಮ್ಮೊಂದಿಗೆ ಕೈಜೋಡಿಸುವಂತೆ ತಿಳಿಸುತ್ತಾ, ಮಹಿಳಾ ಸ್ವ ಸಹಾಯ ಗುಂಪುಗಳು ಪ್ರಾರಂಭಿಸುವ ಕಿರು ಉದ್ದಿಮೆಗಳಿಗೆ ಸುಲಭ ಸಾಲ ಸೌಲಭ್ಯ ನೀಡುವಲ್ಲಿ ಬ್ಯಾಂಕ್‌ಗಳ ಜವಾಬ್ದಾರಿ ಹಾಗೂ ಪ್ರಾಮುಖ್ಯತೆಯನ್ನು ವಿವರಿಸಿದರು.
ಕಾರ್ಯಾಗಾರದಲ್ಲಿ ಮಹಿಳಾ ಸ್ವ ಸಹಾಯ ಗುಂಪಿನ ಹಣಕಾಸು ಸಾಕ್ಷರತೆ, ಜೀವನೋಪಾಯ ಚಟುವಟಿಕೆಗಳಿಗೆ ಬ್ಯಾಂಕ್ ಸಾಲ ನೀಡುವಿಕೆ, ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಎಸ್‌ಬಿವೈ ಮತ್ತು ಪಿಎಂಜೆಜೆಬಿವೈ, ಡಿಜಿಟಲ್ ಸಾಕ್ಷರತೆ, ಮಹಿಳಾ ಸಬಲೀಕರಣ, ಆನ್ ಲೈನ್ ಮೂಲಕ ಸಾಲ ನೀಡುವಿಕೆ ಮತ್ತು ಆರ್ಥಿಕ ಸೇರ್ಪಡೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತಂತೆ ಎನ್‌ಐಆರ್‌ಡಿ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ರೆಡ್ಡಿ ವಿಸ್ತೃತ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಕರಾವಳಿ ಭಾಗದ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಬ್ಯಾಂಕ್ ಮ್ಯಾನೇಜರ್ಸ್ ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.
ಎನ್‌ಐಆರ್‌ಡಿ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ರೆಡ್ಡಿ, ಸಹಾಯಕ ಯೋಜನಾಧಿಕಾರಿ ಕೃಷ್ಣ ಶಾಸ್ತ್ರಿ ಹಾಗೂ ಕರಾವಳಿ ಭಾಗದ ತಾಲೂಕುಗಳ ಬ್ಯಾಂಕ್ ಮ್ಯಾನೇಜರ್ಸ್, ಎನ್.ಆರ್.ಎಲ್.ಎಮ್. ಜಿಲ್ಲಾ ಮತ್ತು ತಾಲೂಕು ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top