ನಿರ್ಜನ ಪ್ರದೇಶದಲ್ಲಿ ಕೋಟ್ಯಾಂತರ ನಗದನ್ನು ಕಾರಿನಲ್ಲಿ ಬಿಟ್ಟು ಹೋದವರು ಯಾರು?
ಅಕ್ಷಯ ಶೆಟ್ಟಿ ರಾಮನಗುಳಿ
ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಪಕ್ಕ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಕಂಡು ಬಂದ ಅನುಮಾನಾಸ್ಪದ ಕಾರಿನಲ್ಲಿ ಬರೋಬ್ಬರಿ 1 ಕೋಟಿ 14 ಲಕ್ಷದ 99 ಸಾವಿರದ 500 ರೂಪಾಯಿ ನಗದು ಪತ್ತೆಯಾಗಿದ್ದು ಅಂಕೋಲಾ ಪೋಲಿಸರು ಹಣವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ನಡೆದ ಘಟನೆ ಏನು?
ಮಂಗಳವಾರ ಬೆಳಿಗ್ಗೆ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ಕಾರು ನಿಂತಿರುವುದನ್ನು ಕಂಡ ಸ್ಥಳೀಯರು ಅಂಕೋಲಾ ಪೋಲಿಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಬಂದ ಪೋಲಿಸರು ಕಾರನ್ನು ಪರಿಶೀಲಿಸಿ ವಶಪಡಿಸಿಕೊಂಡರು. ಕಾರಿನಲ್ಲಿದ್ದ ಭಾರಿ ಮೊತ್ತದ ಹಣ ಕಂಡು ಪೋಲಿಸರೇ ಶಾಕ್ ಆಗಿ ದಂಗಾಗಿ ಹೋಗಿದ್ದಾರೆ.
ಪೋಲಿಸರು ವಶಪಡಿಸಿಕೊಂಡಿರುವ ಬಿಳಿ ಬಣ್ಣದ ಕ್ರೇಟಾ ಕಾರಿನ ನೊಂದಣಿ ಸಂಖ್ಯೆ ಮತ್ತು ವಾಹನದ ಮಾಡೆಲ್ ಗೆ ಮ್ಯಾಚ್ ಆಗದಿರುವುದು ಹಾಗೂ ಹತ್ತಿರದ ಶಾಲೆಯ ಪಕ್ಕದ ರಸ್ತೆಯಲ್ಲಿ ಬೇರೆ ಬೇರೆ ನೊಂದಣಿಯ ನಂಬರ್ ಪ್ಲೇಟ್ ಗಳಿರುವುದು ಪತ್ತೆಯಾಗಿದ್ದು ಹವಾಲಾ ಮಾದರಿಯಲ್ಲಿ ಅಕ್ರಮವಾಗಿ ಹಣ ಸಾಗಿಸಲು ಮತ್ತು ಪೋಲಿಸರ ದಿಕ್ಕು ತಪ್ಪಿಸಲು ನಂಬರ್ ಬದಲಾಯಿಸಿ ಕಾರು ಚಲಾಯಿಸುತ್ತಿರುವ ಶಂಕೆ ವ್ಯಕ್ತಗೊಂಡಿದೆ.
ಕಾರಿನ ಸೀಟ್ ಸುತ್ತಮುತ್ತ ಮೇಲ್ನೋಟಕ್ಕೆ ಯಾರಿಗೂ ಅರಿವಿಗೂ ಬಾರದಂತೆ ಪ್ರತ್ಯೇಕ ಕಂಪಾರ್ಟ್ಮೆಂಟ್ ಮಾಡಿ ಅಲ್ಲಿ 500, 200, 100 ನೋಟುಗಳ ಹಣದ ಕಂತೆಗಳನ್ನು ಹುದುಗಿಸಿರಿಟ್ಟುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಈ ಕಾರಿನ ಬೋನಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ ಹಾಗೂ ಕಾರಿನ ಗಾಜುಗಳು ಜಖಂಗೊಂಡು ಚೂರು ಚೂರಾಗಿ ಬಿದ್ದಿರುವುದನ್ನು ನೋಡಿದರೆ, ಈ ಕಾರಿನಲ್ಲಿ ಭಾರೀ ಪ್ರಮಾಣದಲ್ಲಿ ಹಣ ಸಾಗಿಸುತ್ತಿರುವುದು ಗೊತ್ತಿರುವ ಯಾರೋ ತಮ್ಮ ತಮ್ಮ ಒಳಗೆ ವ್ಯವಹಾರಿಕ ಭಿನ್ನಾಭಿಪ್ರಾಯ ಇಲ್ಲವೇ ಇತರೆ ಕಾರಣಗಳಿಂದ ಜಗಳವಾಡಿಕೊಂಡಿರಬಹುದೇ? ಅಥವಾ ಇವರ ವ್ಯವಹಾರದ ಮೇಲೆ ಕಣ್ಣಿಟ್ಟು ಬೇರೆ ಯಾರಾದರೂ ಬಂದು ದರೋಡೆ ಮಾದರಿಯಲ್ಲಿ ಕಾರಿನವರ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕಷ್ಟು ಹಣ ಲೂಟಿ ಮಾಡಿ ಪರಾರಿಯಾಗಿರಬಹುದೇ? ಕಾರಿನಲ್ಲಿ ಕೇವಲ ಡ್ರೈವರ್ ಮಾತ್ರ ಇರಲು ಸಾಧ್ಯವೇ ? ಇತರ ಯಾರಾದರೂ ಇದ್ದರೇ ? ಇದ್ದರೆ ಈಗ ಡೈವರ್ ಆಗಲಿ ಉಳಿದವರಾಗಲೀ ಎಲ್ಲಿ ಹೋದರು? ಇದರ ಹಿಂದೆ ಪಕ್ಕದ ಜಿಲ್ಲೆ ಅಥವಾ ರಾಜ್ಯದ ಬಂಗಾರದ ವ್ಯಾಪಾರಿಗಳ ಇಲ್ಲವೇ ಇತರೇ ದೊಡ್ಡ ದೊಡ್ಡ ವ್ಯವಹಾರಸ್ಥರ ಹವಾಲ ಹಣ ಆಗಿರಬಹುದೇ ಎಂಬ ಅನುಮಾನಗಳು ಜನರ ಬಾಯಲ್ಲಿ ಹನುಮನ ಬಾಲದಂತೆ ಉದ್ದವಾಗುತ್ತಲೇ ಇವೆ.
ಸುತ್ತಮುತ್ತಲಿನ ಹುಬ್ಬಳಿ, ಕಿರವತ್ತಿ, ಕಲಘಟಗಿ, ಉಡುಪಿ, ದ.ಕ ಭಾಗದಲ್ಲಿ ಎಲ್ಲಿಯೂ ಈ ಕಾರಿನ ಕುರಿತಾಗಲಿ, ವಶಪಡಿಸಿಕೊಂಡಿರುವ ಹಣದ ಕುರಿತಾಗಲಿ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದ್ದು, ವಾರಸುದಾರರಿಲ್ಲದೇ ಈ ಹಣ, ಕಾರು ಯಾರದ್ದು ಎಂಬ ಪ್ರಶ್ನೆ ಎಲ್ಲೆಡೆ ಚರ್ಚೆಗೊಳಪಡುತ್ತಿದೆ. ಆದಾಯ ತೆರಿಗೆ ಇಲಾಖೆಯ, ಪೋಲಿಸ್ ಇಲಾಖೆಯ ತನಿಖೆಯಿಂದ ಸಂಪೂರ್ಣ ಚಿತ್ರ ಹೊರಬೀಳಬೇಕಿದೆ.