ಕಾರವಾರ: ಭಾರತೀಯ ಹವಾಮಾನ ಇಲಾಖೆಯ ಆರಂಭಗೊಂಡ 150 ನೇ ವರ್ಷಾಚರಣೆಯ ಕಾರ್ಯಕ್ರಮವು ಕಾರವಾರದ ವಾರ್ತಾ ಭವನದಲ್ಲಿನ ಹವಾಮಾನ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್ ಮಾತನಾಡಿ, ವಾತಾವರಣದಲ್ಲಿ ಬದಲಾವಣೆಗಳನ್ನು, ವೈಪರೀತ್ಯಗಳನ್ನು ಅವಲೋಕಿಸಿ , ಪ್ರಾಕೃತಿಕ ವಿಕೋಪಗಳು ಸಂಭವಿಸುವ ಕುರಿತಂತೆ ಹವಾಮಾನ ಇಲಾಖೆ ನೀಡುವ ಎಚ್ಚರಿಕೆಗಳು ಹಾಗೂ ಮುನ್ಸೂಚನೆಗಳು ಅತ್ಯಂತ ಉಪಯುಕ್ತವಾಗಿದ್ದು, ಸಾರ್ವಜನಿಕರ ಪ್ರಾಣ ಉಳಿಸುವಲ್ಲಿ , ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಮತ್ತು ತುರ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅತ್ಯಂತ ಸಹಕಾರಿಯಾಗಿವೆ ಎಂದರು.
ಕಾರವಾರದ ಹವಾಮಾನ ಇಲಾಖೆ ಕಚೇರಿಯ ಅಧಿಕಾರಿ ಅಭಿಲಾಷ್ ಮಾತನಾಡಿ, ವರ್ಷದ 365 ದಿನವೂ ಹವಾಮಾನ ಇಲಾಖೆ ಕಾರ್ಯನಿರ್ವಹಿಸಲಿದ್ದು, ವಾತಾವರಣದಲ್ಲಿ ಪ್ರತಿ ದಿನ ಕಂಡುಬರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ , ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಸಮುದ್ರದಲ್ಲಿ ಸಂಭವಿಸುವ ಬದಲಾವಣೆಗಳ ಕುರಿತಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ಮುನ್ಸೂಚನೆಗಳನ್ನು ನೀಡುತ್ತಿದ್ದು, ದೇಶದ ರಕ್ಷಣಾ ಪಡೆಗಳಿಗೂ, ವೈಮಾನಿಕ ಕ್ಷೇತ್ರಕ್ಕೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಗೂ ಸಹ ಹವಾಮಾನ ಇಲಾಖೆಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದರು.
ಹವಾಮಾನ ಇಲಾಖೆಯ 150 ನೇ ವರ್ಷಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ವಿಶೇಷ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆಗೊಳಿಸಿದ್ದು, ಹವಾಮಾನ ಮುನ್ಸೂಚನೆ ಕುರಿತಂತೆ ಮತ್ತಷ್ಟು ತ್ವರಿತ, ನಿಖರ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಮಿಷನ್ ಮೌಸಮ್ ಎಂಬ ವಿನೂತನ ಕಂಪ್ಯೂಟಿಂಗ್ ಸಿಸ್ಟಂ ನ್ನು ಬಿಡುಗಡೆಗೊಳಿಸಿದ್ದಾರೆ ಎಂದರು.
ಕಾರವಾರದಲ್ಲಿ 1877 ರಿಂದ ಹವಾಮಾನ ಇಲಾಖೆಯು ಕಾರ್ಯನಿರ್ವಹಿಸುತ್ತಿದ್ದು, ದೇಶದ ಅತ್ಯಂತ ಹಳೆಯ ವೀಕ್ಷಣಾಲಯವು ಕಾರವಾರದ ಕೋಡಿಭಾಗದಲಿದ್ದು, ಜಿಲ್ಲೆಯಲ್ಲಿನ ಅರಬ್ಬೀ ಸಮುದ್ರದಲ್ಲಿನ ಬದಲಾವಣೆಗಳು, ಮಾನ್ಸೂನ್ ಮಳೆಯ ಮುನ್ಸೂಚನೆ ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ, ದರ್ಶನ್ ನಾಯ್ಕ, ದೀಪಕ್ ಗೋಕರ್ಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹವಾಮಾನ ಇಲಾಖೆಯ ನಿವೃತ್ತ ಸಿಬ್ಬಂದಿ ಲಕ್ಷ್ಮೇಶ್ವರ್ ರವರನ್ನು ಸನ್ಮಾನಿಸಲಾಯಿತು.