ಹೊನ್ನಾವರ: ತಾಲೂಕಾಸ್ಪತ್ರೆಯಲ್ಲಿನ ಡಯಾಲಿಸಿಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಹೆರಿಗೆ ರಜೆಯ ಮೇಲೆ ತೆರಳಿದ್ದ ಸಿಬ್ಬಂದಿಯೊರ್ವರನ್ನು ಪುನಃ ಕೆಲಸಕ್ಕೆ ಸೇರ್ಪಡಿಸಿಕೊಳ್ಳುವಂತೆ ಡಯಾಲಿಸಿಸ್ ರೋಗಿಗಳು ಹಾಗೂ ರೋಗಿ ಸಂಬಂಧಿಗಳು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಚಂದ್ರಶೇಖರ್, ಕಿರಣ ಭಂಡಾರಿ,ಪ್ರಕಾಶ,ಉಲ್ಲಾಸ ಮಹಾಲೆ ಮಾತನಾಡಿ,ತಾಲೂಕಾಸ್ಪತ್ರೆಯಲ್ಲಿ ಡಯಾಲಿಸಿಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಇಲ್ಲಿ ಯಶೋಧಾ ಸಿಸ್ಟರ್ ಎನ್ನುವವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು.ಡಯಾಲಿಸಿಸ್ ನಲ್ಲಿ ಅನುಭವಿಯಾಗಿದ್ದವರು. ಕರೋನಾ ಸಂದರ್ಭದಲ್ಲಿಯು ಸಹ ರೋಗಿಗಳಿಗೆ ಡಯಾಲಿಸಿಸ್ ಸೇವೆ ಸಲ್ಲಿಸಿದವರು. ಹೆರಿಗೆ ರಜೆಯಲ್ಲಿ ತೆರಳಿದ್ದರು. ಈ ವೇಳೆ ಡಯಾಲಿಸಿಸ್ ಗೆ ಹೊಸ ಕಂಪನಿ ಗುತ್ತಿಗೆ ಪಡೆದಿದ್ದರಿಂದ ಇವರು ಹೆರಿಗೆ ರಜೆ ನಂತರ ಮರಳಿ ಬಂದಾಗ ಕೆಲಸಕ್ಕೆ ಸೇರ್ಪಡೆಗೊಳಿಸಿಕೊಂಡಿಲ್ಲ.ಪುನಃ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದರು.
ಇನ್ನು ಈ ಬಗ್ಗೆ ಡಯಾಲಿಸಿಸ್ ಘಟಕದಲ್ಲಿ ಸೇವೆ ಸಲ್ಲಿಸಿದ್ದ ಯಶೋಧಾ ಅವರು ದೂರವಾಣಿ ಮೂಲಕ ಮಾತನಾಡಿ,ನಾನು 7 ವರ್ಷ ಹೊನ್ನಾವರ ಡಯಾಲಿಸಿಸ್ ಕೇಂದ್ರದಲ್ಲಿ ಈ ಊರಿನ ಜನರಿಗೆ ಸೇವೆ ಕೊಟ್ಟಿದ್ದೇನೆ. ನಾನು ಹೆರಿಗೆ ರಜೆಗೆ ಹೋದ ಕಾರಣ ನನಗೆ ಕಂಪನಿಯವರು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ.
ಈ ಊರಿನ ಜನರಿಗೆ ಹಾಗೂ ಆಸ್ಪತ್ರೆಗೆ ನನ್ನ ಅವಶ್ಯಕತೆ ಇತ್ತೆಂದರೆ ಹಾಗೂ ನನ್ನನು ಕೆಲಸಕ್ಕೆ ಸೇರಿಸಿಕೊಂಡರೆ ನನ್ನ ಸೇವೆಯನ್ನು ಪುನಃ ಮುಂದುವರೆಸಲು ಸಿದ್ದಳಿದ್ದೇನೆ ಎಂದಿದ್ದಾರೆ.