ಹೊನ್ನಾವರ: ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಪ್ರೌಢಶಾಲೆ, ಕೋಟೆಬೈಲ್ ಶಾಲಾ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ, ರಾಜ್ಯಮಟ್ಟಕ್ಕೆ ಪ್ರವೇಶ ಪಡೆದು ಸಾಧನೆ ಮಾಡಿದ್ದಾರೆ.
ಇತ್ತೀಚಿಗೆ ಭಟ್ಕಳದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಿಮಿಕ್ರಿ ವಿಭಾಗದಲ್ಲಿ ನವೀನ್ ಗಣಪತಿ ಗೌಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಕಳೆದ ಶೈಕ್ಷಣಿಕ ವರ್ಷದಲ್ಲಿಯೂ ಕೂಡ ಈ ವಿದ್ಯಾರ್ಥಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದನು. ಕಾರವಾರದಲ್ಲಿ ನಡೆದ ಯುವ ಸಂಸತ್ತು ಸ್ಪರ್ಧೆಯಲ್ಲಿ ಕುಮಾರಿ ಶ್ರೀನಿಧಿ ಪ್ರಕಾಶ್ ನಾಯ್ಕ ಪ್ರಥಮ ಸ್ಥಾನ ಪಡೆದು ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಈ ಹಿಂದೆ ಭಾಗವಹಿಸಿದ್ದಳು.ಯೋಗ ಸ್ಪರ್ಧೆಯಲ್ಲಿ ಕುಮಾರಿ ವಿನುಗೌಡ ವಿಭಾಗ ಮಟ್ಟದಲ್ಲಿ ತನ್ನ ಪ್ರದರ್ಶನವನ್ನು ರಿದಮಿಕ್ ಯೋಗದಲ್ಲಿ ನೀಡಿರುತ್ತಾಳೆ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುಮಾರಿ ಅನನ್ಯ ತಿಪ್ಪಯ್ಯ ನಾಯ್ಕ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.ಕಳೆದ ಎರಡು ವರ್ಷಗಳಿಂದ ಶಾಲೆಯು ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ 100% ಫಲಿತಾಂಶವನ್ನು ನೀಡುತ್ತಾ ಬಂದಿದ್ದು ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಮುಖ್ಯೋಪಾಧ್ಯಾಯರು,ಶಿಕ್ಷಕ ವೃಂದ,ಎಸ್. ಡಿ. ಎಂ. ಸಿ. ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಪೋಷಕರ ಸಂತಸಕ್ಕೆ ಕಾರಣವಾಗಿದೆ. ಈ ವಿದ್ಯಾರ್ಥಿಗಳಿಗೆ ಎಲ್ಲರೂ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.