ಸಿದ್ದಾಪುರ: ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಶಾಲಾ ವಿದ್ಯಾರ್ಥಿಗಳು ನಿಸರ್ಗ ಇಕೋ ಕ್ಲಬ್ ಅಡಿಯಲ್ಲಿ ತಾವೇ ನಾಟಿ ಮಾಡಿದ ಗದ್ದೆಯನ್ನು ಕೊಯ್ಲು ಮಾಡುವುದರ ಮೂಲಕ ಸಂಪೂರ್ಣ ಕೃಷಿ ಅಧ್ಯಯನದ ಅನುಭವ ಪಡೆದರು.
ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 12ರಂದು ಗದ್ದೆನಾಟಿ ಮಾಡಿದ್ದರು. ಇದೀಗ ಕೊಯ್ಲು ಮಾಡಿವದರ ಮೂಲಕ ಕೃಷಿ ಚಟುವಟಿಕೆಯ ಪ್ರಾಯೋಗಿಕ ಅನುಭವ ಪಡೆದರು. ಶಾಲೆಯ 6 ಮತ್ತು 7ನೇ ತರಗತಿಯ 16 ವಿದ್ಯಾರ್ಥಿಗಳು ಹತ್ತಿರದ ಊರಾದ ಹೆಮಜೆನಿಯ ಲೋಕೇಶ ಪದ್ಮನಾಭ ಗೌಡ ಇವರ ಗದ್ದೆಯಲ್ಲಿ ದೀಪ ಬೆಳಗುವುದರ ಮೂಲಕ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸುರೇಶ ಬಂಗಾರ್ಯ ಗೌಡ ಇವರು ಕೊಯ್ಲಿಗೆ ಚಾಲನೆ ನೀಡಿದರು. ನಂತರ ಮಕ್ಕಳಿಗೆ ಕತ್ತಿ ಹಿಡಿಯುವ ಬಗೆ, ತೆನೆಯನ್ನು ಹದೆ ಹಾಕುವ ರೀತಿಯನ್ನು ಲೋಕೇಶ ಪದ್ಮನಾಭ ಗೌಡ, ಗಣಪತಿ ಕೃಷ್ಣ ಗೌಡ ಇವರು ತಿಳಿಸಿಕೊಟ್ಟರು.
ಕೇವಲ ಒಂದು ತಾಸಿನಲ್ಲಿ ಅಂದಾಜು 5 ಗುಂಟೆ ಕ್ಷೇತ್ರವನ್ನು ಕಟಾವು ಮಾಡುವದರ ಮೂಲಕ ಕೃಷಿ ಕಾರ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದರು.
ಸ್ಥಳದಲ್ಲಿ ಶಾಲೆಯ ಮುಖ್ಯಶಿಕ್ಷಕ ದರ್ಶನ ಹರಿಕಾಂತ, ಸಹಶಿಕ್ಷಕಿ ನಾಗರತ್ನ ಭಂಡಾರಿ, ಅಣ್ಣಪ್ಪ ಭೈರ್ಯ ಗೌಡ, ಲಕ್ಷ್ಮಣ ಭೈರ್ಯ ಗೌಡ, ನಿತ್ಯಾನಂದ ಗೌಡ, ಹೇಮಂತ ಗೌಡ ಹಾಗೂ ಮತ್ತಿತರರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.