ಕುಮಟಾ: ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸ್ತಿಮನೆ ಹತ್ತಿರ ಅರಣ್ಯ ಪ್ರದೇಶದಲ್ಲಿ ಕಂದಕ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಮನರೇಗಾ ಯೋಜನೆಯಡಿ ರೋಜಗಾರ ದಿನಾಚರಣೆ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮ ನಡೆಸಲಾಯಿತು.
ಜಿಲ್ಲಾ ಪಂಚಾಯತಿಯ ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಮಾತನಾಡಿ ಬಡ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಿ, ದೀರ್ಘ ಕಾಲ ಬಾಳಿಕೆ ಬರುವ ಸ್ವತ್ತುಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜೊತೆಯಾಗಿ ನಿಂತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾದ್ದದ್ದು ಜನರ ಜವಾಬ್ದಾರಿ ಎಂದು ಹೇಳಿದರು.
ಮನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ದಿನವೊಂದಕ್ಕೆ 349 ರೂ. ಕೂಲಿಯಂತೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೆಲಸ ನೀಡಲಾಗುತ್ತಿದೆ. ಅರ್ಹ ಕುಟುಂಬಕ್ಕೆ 5 ಲಕ್ಷ ರೂ. ಮಿತಿಯೊಳಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಹೆಣ್ಣು ಗಂಡು ಎಂಬ ಭೇದವಿರದೆ ಎಲ್ಲರಿಗೂ ಸಮಾನ ಕೂಲಿ ನೀಡಲಾಗುತ್ತಿದೆ ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50 ರಷ್ಟು ರಿಯಾಯಿತಿ ಸಹ ಇದ್ದು, ಕೆಲಸದ ಅವಶ್ಯಕತೆ ಇರುವವರು ನಮೂನೆ 6ರಲ್ಲಿ ಗ್ರಾಮ ಪಂಚಾಯತಿಗೆ ಬೇಡಿಕೆ ಸಲ್ಲಿಸಿ, 15 ದಿನಗೊಳಗೆ ಉದ್ಯೋಗ ಪಡೆಯಬಹುದು ಎಂದರು.
ವೈಯಕ್ತಿಕ ಕಾಮಗಾರಿಗಳಾದ ಬಚ್ಚಲು ಗುಂಡಿ, ಎರೆಹುಳು ತೊಟ್ಟಿ, ದನದಕೊಟ್ಟಿಗೆ, ಕುರಿಶೇಡ್, ಕೋಳಿಶೇಡ್, ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು, ಸಿಬೆ ಹಾಗೂ ಇನ್ನಿತರೆ ಬೆಳೆಗಳನ್ನು ತೆಗೆದುಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ರವಿ ಮಾದನಗೇರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಪಾದ ಮಡಿವಾಳ, ಬಿಎಫ್ಟಿ ಭಾಸ್ಕರ್, ಕಾಯಕ ಬಂಧು ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು.