ಹೊನ್ನಾವರ: ವ್ಯಾಕರಣ ದೋಷವಿಲ್ಲದಂತೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿತರೆ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ.ಗೌತಮ ಬಳ್ಕೂರ ಅಭಿಪ್ರಾಯಪಟ್ಟರು.
ಇಲ್ಲಿಯ ಎಸ್.ಡಿ.ಎಂ.ಕಾಲೇಜಿನ ಇಂಗ್ಲಿಷ್ ವಿಭಾಗದ ಇಂಗ್ಲಿಷ್ ಲಿಟರರಿ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪತ್ರಿಕೆ ‘ಬ್ಲೂಮ್’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಮಯದ ಸದುಪಯೋಗ ಮಾಡಿಕೊಳ್ಳುವ ಹವ್ಯಾಸ ರೂಢಿಸಿಕೊಳ್ಳಬೇಕು. ಮೊಬೈಲ್ ಅನ್ನು ಕೇವಲ ಮನರಂಜನೆಯ ಮಾಧ್ಯಮವಾಗಿ ಬಳಸಿಕೊಳ್ಳದೆ ರಚನಾತ್ಮಕ ಕಲಿಕೆಗೆ ಅದನ್ನು ಉಪಯೋಗಿಸಬೇಕು.ಪೌಷ್ಠಿಕ ಆಹಾರ ಸೇವನೆ,ದೈಹಿಕ ಶ್ರಮ ಹಾಗೂ ಉತ್ತಮ ಹವ್ಯಾಸಗಳನ್ನು ಹೊಂದಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು
ಡಾ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಿ.ಎಲ್.ಹೆಬ್ಬಾರ ಮಾತನಾಡಿ,ತರಗತಿಯ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಸುಮಾ ಭಟ್ಟ,ನಿಖಿತಾ ಖಾರ್ವಿ ಪ್ರಾರ್ಥನಾ ಗೀತೆ ಹಾಡಿದರು.ಇಂಗ್ಲಿಷ್ ಲಿಟರರಿ ಕ್ಲಬ್ ಸಂಯೋಜಕಿ ವೆಲೆನ್ಶಿಯಾ ಡಿಸೋಜಾ ಸ್ವಾಗತಿಸಿದರು.ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ.ಹೆಗಡೆ ಅತಿಥಿ ಪರಿಚಯ ಮಾಡಿದರು.ಉಪನ್ಯಾಸಕಿ ಕೆ.ಆರ್. ಶ್ರೀಲತಾ, ರಮ್ಯಾ ಮೇಸ್ತ,ಮಾಲತಿ ನಾಯ್ಕ ನಿರೂಪಿಸಿದರು.ಇಂಗ್ಲಿಷ್ ಲಿಟರರಿ ಕ್ಲಬ್ ನ ಕಾರ್ಯದರ್ಶಿ ಸಹನಾ ಅಂಬಿಗ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.