ಹೊನ್ನಾವರ: ಕರಾವಳಿ ಭಾಗದಲ್ಲಿ ಸಿಹಿ ನೀರಿಗಿಂತ ಉಪ್ಪು ನೀರಿನ ಲಭ್ಯತೆಯೇ ಹೆಚ್ಚಾಗಿದ್ದು, ಅದರಲ್ಲೂ ಶರಾವತಿ ದಡದ ಹಿನ್ನೀರಿನ ಭಾಗಗಳಲ್ಲಂತೂ ಸಿಹಿ ನೀರಿನ ಮೂಲಗಳು ಸಿಗುವುದು ಕಡಿಮೆ ಹೀಗಾಗಿ ಗೇರುಸೋಪ್ಪಾ ಜಲಾಶಯದ ನೀರನ್ನು ಕಾಲುವೆಗಳ ಮೂಲಕ ಹರಿಸಲಾಗುತ್ತದೆ. ಇಂತಹ ಕಾಲುವೆಗಳು ಸುತ್ತಲಿನ ರೈತರ ಜೀವಾಳವಾಗಿದೆ.
ತಾಲೂಕಿನ ಮಾವಿನಕುರ್ವಾ ಗ್ರಾಮದಲ್ಲಿ ಗ್ರಾಮದ ಸುತ್ತಲೂ ರೈತರ ಹೊಲಗಳಲ್ಲಿ ನೀರಿನ ಕಾಲುವೆ ಬಹು ವರ್ಷಗಳಿಂದಲೂ ಇದೆ ಆದರೆ ಈ ಕಾಲುವೆಗಳೆಲ್ಲ ಹೂಳು ತುಂಬಿ ನೀರು ತುಂಬುವ ಸಾಮರ್ಥ್ಯ ಕಡಿಮೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆ ಹೂಳೆತ್ತುವ ಕಾರ್ಯ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ.
2024-25ನೇ ಸಾಲಿನಲ್ಲಿ ಅಂದಾಜು ಮೊತ್ತ 3ಲಕ್ಷ ವೆಚ್ಚದಲ್ಲಿ ತಲಮಂಕಿಯಿಂದ ಪಗಡೆಬೇಲೆ, ಸಾಲೆಹಿತ್ಲು, ಹೊಸಮೋಟೆಯವರೆಗೆ ಸುಮಾರು 400ಮೀ ಉದ್ದದ ಕಾಲುವೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದು ಈಗಾಗಲೇ 370ಮಾನವ ದಿನಗಳನ್ನು ಸೃಜಿಸಲಾಗಿದೆ.
ಗ್ರಾಮದ ಸುತ್ತಲಿನ ರೈತರು ಮಳೆಗಾಲದಲ್ಲಿ ಭತ್ತವನ್ನು ಬೆಳೆಯುತ್ತಿದ್ದರೂ ತೆಂಗು ಬೆಳೆಯೇ ಇವರ ಜೀವನಾಧಾರವಾಗಿದೆ. ಈ ಬೆಳೆ ಉಪ್ಪು ನೀರನ್ನ ಬಿಟ್ಟುಕೊಟ್ಟು ಸಿಹಿನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದೆ ಹೀಗಾಗಿ ಕಾಲುವೆಯಲ್ಲಿ ಬರುವ ನೀರನ್ನು ರೈತರು ತಮ್ಮ ತೋಟಗಳಿಗೆ ಹಾಯಿಸುತ್ತಾರೆ. ಇಂತಹ ಕಾಮಗಾರಿಗಳ ಸದುಪಯೋಗ ರೈತರು ಪಡೆಯಬೇಕು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವ ಆರ್. ಮೇಸ್ತ ತಿಳಿಸಿದರು.
ಕಾಲುವೆ ದುರಸ್ಥಿ ಕಾಮಗಾರಿಯಿಂದ ನಮ್ಮ ಗ್ರಾಮಕ್ಕೆ ನೀರು ಅಧಿಕ ಪ್ರಮಾಣದಲ್ಲಿ ಸಿಗುವುದರ ಜೊತೆಗೆ ನಮ್ಮ ಕುಟುಂಬಗಳಿಗೆ ಉದ್ಯೋಗವು ದೊರೆಯುವಂತಾಗಿದೆ. ಇದರಿಂದ ಉದ್ಯೋಗ ಖಾತ್ರಿ ಯೋಜನೆ ನಮಗೆ ತುಂಬಾ ಅನುಕೂಲತೆ ಕಲ್ಪಿಸಿದೆ ಎಂದು ಕೂಲಿಕಾರ ಮಹಿಳೆ ಅಭಿಪ್ರಾಯ ವ್ಯಕ್ತಪಡಿಸಿದರು.