ಹೊನ್ನಾವರ:ತಾಲೂಕಿನ ಚಿಕ್ಕನಕೋಡ ಶ್ರೀ ದುರ್ಗಾಂಬಾ ದೇವಸ್ಥಾನದ 73ನೇ ವಾರ್ಷಿಕ ವರ್ಧಂತಿ ಉತ್ಸವ ಎರಡು ದಿನಗಳಕಾಲ ವಿಜೃಂಭಣೆಯಿಂದ ನಡೆಯಿತು.
ವರ್ಧಂತಿ ಉತ್ಸವ ನಿಮಿತ್ತ ನಡೆದ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರಾದ ರವಿ ಎಮ್. ನಾಯ್ಕ ಚಾಲನೆ ನೀಡಿ ಪ್ರತಿಭೆಗಳ ಗುರುತಿಸುವುದು,ಸಾಧಕರ ಸನ್ಮಾನ ಇದು ಉತ್ತಮ ಸಂಪ್ರದಾಯ ಎಂದು ಸಂಘಟಕರ ಕಾರ್ಯ ಶ್ಲಾಘಿಸಿದರು.ಶಿಕ್ಷಣ ಎನ್ನುವುದು ಬಹಳ ಪ್ರಾಮುಖ್ಯವಾದ ವಿಷಯ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ.ಕನ್ನಡ ಮಾಧ್ಯಮ ಎಂದರೆ ಕಡೆಗಣಿಸಬೇಡಿ.ಇದು ಬಹಳ ಪಾಂಡಿತ್ಯ ಇರುವ, ಇತಿಹಾಸದ ಹಿನ್ನೆಲೆ ಇರುವ ಭಾಷೆಯಾಗಿದೆ. ಸಾಹಿತ್ಯಿಕವಾಗಿಯೂ ಬಹಳ ಪ್ರಾಚೀನವಾದ ಭಾಷೆ. ಇಂಗ್ಲೀಷ್ ಭಾಷೆ ಅಥವಾ ಕಾನ್ವೆಂಟ್ ಗೆ ಸೇರಿಸುವುದು ಒಂದು ಫ್ಯಾಷನ್ ಆಗಿದೆ. ಆದರೆ ಕನ್ನಡ ಶಾಲೆಗಳಲ್ಲಿಯು ಉತ್ತಮ ಶಿಕ್ಷಕ ವೃಂದವಿದೆ ಎಂದು ಕನ್ನಡಭಾಷಾಭಿಮಾನ ವ್ಯಕ್ತಪಡಿಸಿದರು.
ವಿಶ್ರಾಂತ ಪ್ರಾಚಾರ್ಯ ವಿ.ಐ.ನಾಯ್ಕ ಮಾತನಾಡಿ, ಜ್ಞಾನ ಮಾರ್ಗ,ಭಕ್ತಿ ಮಾರ್ಗ,ಕರ್ಮ ಮಾರ್ಗದ ಮೂಲಕ ದುರ್ಗಾಶಕ್ತಿ ಅನುಗ್ರಹಿಸಿಕೊಳ್ಳಬಹುದಾಗಿದೆ. ಇಲ್ಲಿ ದುರ್ಗಾದೇವಿ ನೆಲೆನಿಂತಿರುವ ಕ್ಷೇತ್ರವಾಗಿದ್ದರಿಂದ ಇದೊಂದು ಪುಣ್ಯಸ್ಥಳವಾಗಿದೆ.ಯಜ್ಞ ಯಾಗ ಮಾಡುವುದರಿಂದ ಮನುಷ್ಯನಲ್ಲಿನ ಅಂತಃಶಕ್ತಿವೃದ್ದಿಯಾಗುತ್ತದೆ.ಆರೋಗ್ಯಕರ ಪ್ರಯೋಜನದ ಜತೆಗೆ ಪರಿಸರವು ಶುದ್ದವಾಗುತ್ತದೆ ಎಂದರು.
ಸಾಹಿತಿ ಸುಮುಖಾನಂದ ಜಲವಳ್ಳಿ ಮಾತನಾಡಿ, ಇಂದು ದೇವರು,ಧರ್ಮ ನಮ್ಮಲ್ಲಿ ಜ್ಞಾನ, ಪ್ರಜ್ಞೆ ಮೂಡಿಸುವ ಬದಲಾಗಿ ಇನ್ನಷ್ಟು ಮೌಢ್ಯಕ್ಕೆ ಕೊಂಡೊಯ್ಯುತ್ತಿದೆ.ನಾವು ಮಾತೃ ಮೂಲ ಸಂಸ್ಕೃತಿಯಿಂದ ಬಂದವರು. ಭಕ್ತಿ,ಜ್ಞಾನ,ದೇವರು ಇವುಗಳ ಬಗ್ಗೆ ವೈಚಾರಿಕವಾಗಿ ಆಲೋಚನೆ ಮಾಡಬೇಕು. ದೇವರು ಸತ್ಯ,ಧರ್ಮವು ಸತ್ಯ,ಆದರೆ ಅವುಗಳ ಹಿಂದಿರುವ ತಿಳುವಳಿಕೆ ವೈಚಾರಿಕವಾಗಿ, ವೈಜ್ಞಾನಿಕ ಆಲೋಚನೆ ಮಾಡಬೇಕಾಗುತ್ತದೆ ಎಂದರು.
ವಿವಿಧ ಕ್ಷೇತ್ರದದಲ್ಲಿ ಸೇವೆ ಸಲ್ಲಿಸಿದ ದಾಮೋದರ ನಾಯ್ಕ,ಸುಪ್ರಿತಾ ಆಚಾರ್ಯ,ಗೋವಿಂದ ನಾಯ್ಕ, ಭಾಸ್ಕರ ನಾಯ್ಕ,ಲಕ್ಷ್ಮಣ ನಾಯ್ಕ,ಗಣಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕನಕೋಡ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ಯಾಮಲಾ ನಾಯ್ಕ ಮಾತನಾಡಿ, ಪ್ರತಿಭೆಗಳ ಗುರುತಿಸುವುದು,ಸಾಧಕರ ಸನ್ಮಾನಿಸುವುರಿಂದ ಇತರರಿಗೆ ಪ್ರೇರಣೆ ಆಗುತ್ತದೆ. ಶ್ರಮಜೀವಿ,ಹಿರಿಯರ ಗೌರವಿಸುವ ಮೂಲಕ ಸಮಾಜಕ್ಕೆ,ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ಸಿಗುತ್ತದೆ.ಈ ನಿಟ್ಟಿನಲ್ಲಿ ಆರ್.ಪಿ ನಾಯ್ಕರ ನೇತೃತ್ವದಲ್ಲಿ ಉತ್ತಮ ಕಾರ್ಯ ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ ಪಿಡಬ್ಲ್ಯೂಡಿ ಕುಮಟಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಮ್.ಪಿ ನಾಯ್ಕ,ಉದ್ಯಮಿಗಳಾದ ಎಮ್.ಆರ್.ನಾಯ್ಕ ಚಿಕ್ಕನಕೊಡ ಗ್ರಾಮ ಪಂಚಾಯತ ಸದಸ್ಯ ವಿಘ್ನೇಶ್ವರ ಹೆಗಡೆ, ರಾಜು ನಾಯ್ಕ, ನಾಗೇಶ ಪುಟ್ಟು ನಾಯ್ಕ ಉಪಸ್ಥಿತರಿದ್ದರು.ಆರಾಧ್ಯ ನಾಯ್ಕ ಪ್ರಾರ್ಥಿಸಿದರು. ರಕ್ಷಾ ನಾಯ್ಕ ಸ್ವಾಗತಿಸಿದರು. ಪಾಂಡುರಂಗ ನಾಯ್ಕ ವಂದಿಸಿದರು. ದಯಾನಂದ ನಾಯ್ಕ,ಪವಿತ್ರಾ ನಾಯ್ಕ ನಿರ್ವಹಿಸಿದರು.
ಧಾರ್ಮಿಕ ಕಾರ್ಯಕ್ರಮ: ಡಿ. 13ರಂದು ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಪುಣ್ಯಾಹ, ಬ್ರಹ್ಮಕುರ್ಚಾಹವನ, ಗಣಹವನ, ಅಧಿವಾಸ ಹೋಮ, ದ್ವಜಾರೋಹಣ, ಮಧ್ಯಾಹ್ನ 3 ಗಂಟೆಯಿಂದ ಪಲ್ಲಕ್ಕಿ ಗ್ರಾಮೋತ್ಸವ, ರಾತ್ರಿ ಕಲಾವೃದ್ಧಿ ಹೋಮ, ನವಚಂಡಿ ಕಲಶ ಸ್ಥಾಪನೆ, ಬ್ರಹ್ಮಕಲಶ ಸ್ಥಾಪನೆ, ಸತ್ಯನಾರಾಯಣ ವೃತಾರಂಭ, ರಂಗ ಪೂಜಾ, ಮಹಾಬಲಿ, ರಾಜೋಪಚಾರ ಸೇವೆ ನಡೆಸಲಾಗಿತ್ತು.ಡಿ.14ರಂದು ಬೆಳಿಗ್ಗೆ ಶಾಂತಿ ಹೋಮ, ಕಲಶಾಭಿಷೇಕ, ಸಾಮೂಹಿಕ ಸತ್ಯನಾರಾಯಣ ವೃತ, ನವಚಂಡಿಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ, ಮಂತ್ರಾಕ್ಷತೆ, ಆಶೀರ್ವಾದ ಗೃಹಣ, ಅನ್ನಸಂತರ್ಪಣೆ ನಡೆಯಿತು.ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ವಿದ್ವಾನ್ ಕಟ್ಟೆ ತಿಮ್ಮಣ್ಣ ಭಟ್ಟರ ಅಧ್ವರ್ಯದಲ್ಲಿ ಜರುಗಿತು.
ಶ್ರೀ ದುರ್ಗಾಂಬಾ ಟ್ರಸ್ಟನ ಪ್ರಮುಖರಾದ ಆರ್.ಪಿ ನಾಯ್ಕ ಮುಂದಾಳತ್ವದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಸಾವಿರಾರು ಸಂಖ್ಯೆಯ ಭಕ್ತರು ದೇವಾಲಾಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಕೃತಾರ್ತರಾದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.