ಮಂದಗತಿಯ ಕಾಮಗಾರಿಗೆ ರೋಸಿಹೋದ ಜನತೆ
ಅಕ್ಷಯ ಶೆಟ್ಟಿ ರಾಮನಗುಳಿ
ಯಲ್ಲಾಪುರ: ಹದಗೆಟ್ಟ ಅರಬೈಲ್ ಘಟ್ಟದ ರಸ್ತೆಯಲ್ಲಿ ಪ್ಲೈವುಡ್ ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ಘಟ್ಟದ ತಿರುವಿನಲ್ಲಿ ಪಲ್ಟಿಯಾದ ಕಾರಣ ಗಂಟೆಗಟ್ಟಲೇ ಅಂಕೋಲಾ-ಯಲ್ಲಾಪುರ ರಸ್ತೆ ಸಂಚಾರದಲ್ಲಿ ವ್ಯತ್ಯಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಅರಬೈಲ್ ಘಟ್ಟದ ರಸ್ತೆಯಲ್ಲಿ ಇತ್ತೀಚೆಗೆ ಪ್ಯಾಚ್ ವರ್ಕ್ ಕೆಲಸ ಪ್ರಾರಂಭಗೊಂಡಿತ್ತು. ಆದರೆ ಘಟ್ಟದ ಪ್ರಮುಖ ಅಪಾಯಕಾರಿ ತಿರುವುಗಳಲ್ಲಿ ಪ್ಯಾಚ್ ವರ್ಕ್ ಮಾಡದೇ ಅಲ್ಲಲ್ಲಿ ಕೇವಲ ನಾಮಕಾವಸ್ಥೆಗೆ ಗುಂಡಿಗಳಿಗೆ ಪ್ಯಾಚ್ ವರ್ಕ್ ಮಾಡಿರುವ ಕಾರಣ ಭಾರಿ ವಾಹನಗಳು ಸಂಚಾರ ಮಾಡುವುದು ತೀರ ಕಷ್ಟಕರವಾಗಿದೆ.
ಟೆಂಡರ್ ನಡೆದು 6 ತಿಂಗಳು ಸಮೀಪಿಸಿದರೂ ಗುತ್ತಿಗೆ ಸಂಸ್ಥೆ ಸರಿಯಾಗಿ ಗುಂಡಿಗಳನ್ನು ಮುಚ್ಚದೇ ಇರುವುದು ಅಪಘಾತಗಳಿಗೆ ನೇರ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಿರಸಿ-ಕುಮಟಾ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವ ಕಾರಣ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಮೊದಲಿಗಿಂತ ಹೆಚ್ಚಾಗಿದೆ. ರಸ್ತೆಯ ಅವಸ್ಥೆ ದಿನದಿಂದ ತೀರ ಹದಗೆಡುತ್ತಿದ್ದರೂ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆಯೇ ಎಂದು ನಾಗರಿಕರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳು, ಶಿಕ್ಷಕರು
ಮುಂಜಾನೆ 8 ಗಂಟೆಗೆ ಶಾಲಾ-ಕಾಲೇಜಿಗೆ ಸೇರಬೇಕಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಅರಬೈಲ್ ಘಟ್ಟದ ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ಇತ್ತ ಮನೆಗೂ ಬರಲಾಗದೇ, ಅತ್ತ ಶಾಲಾ-ಕಾಲೇಜಿಗೂ ತೆರಳಲಾಗದೇ ಒದ್ದಾಡಿದ ಘಟನೆ ನಡೆಯಿತು. ಪೋಲಿಸರ ಸಹಕಾರದಿಂದ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಕಾರಣ 11-12 ಗಂಟೆಗೆ ಮಕ್ಕಳು ಶಾಲಾ,ಕಾಲೇಜು ಸೇರಿದ ಪ್ರಸಂಗ ನಡೆದಿದೆ.
ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿ
ಘಟ್ಟದ ರಸ್ತೆಯಲ್ಲಿ ಪ್ಯಾಚ್ ವರ್ಕ್ ಕಾರ್ಯವನ್ನು ಮನಸ್ಸೋ ಇಚ್ಛೆ ಮಾಡಿದ್ದಾರೆ. ಅಗತ್ಯವಿದ್ದಲ್ಲಿ ಪ್ಯಾಚ್ ವರ್ಕ್ ಮಾಡಿಯೇ ಇಲ್ಲ. ಅತ್ತ ಘಟ್ಟದಲ್ಲಿ ಗಟಾರದ ಕೆಲಸ ಕೂಡ ನಿಧಾನಗತಿಯಲ್ಲಿ ನಡೆಯುತ್ತಿದೆ. ಅರಬೈಲ್ ಘಟ್ಟದ ರಸ್ತೆಯ ಕುರಿತು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೇಂದ್ರ ಸರ್ಕಾರದ ಗಮನ ಸೆಳೆದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಲಕ್ಷ್ಯವಹಿಸಲು ಹೇಳಬೇಕಿದೆ ಎಂದು ಪ್ರಜ್ಞಾವಂತ ನಾಗರಿಕರು ಹೇಳುತ್ತಿದ್ದಾರೆ.
ಅರಬೈಲ್ ಘಟ್ಟದ ಅಪಾಯಕಾರಿ ತಿರುವುಗಳಲ್ಲಿ ಉಂಟಾದ ಭೀಕರ ಹೊಂಡಗಳನ್ನು ಮುಚ್ಚದೇ ಹಾಗೇ ಬಿಟ್ಟಿರುವುದರಿಂದ ಅಪಘಾತಗಳು ಹೆಚ್ಚೆಚ್ಚು ನಡೆಯುತ್ತಿವೆ. ಹೆದ್ದಾರಿ ಅಭಿವೃದ್ಧಿ ಇಲಾಖೆಯು ಗಾಢನಿದ್ರೆಯಲ್ಲಿರುವಂತೆ ಕಂಡುಬರುತ್ತಿದ್ದು ಹೀಗೆ ಮುಂದುವರಿದಲ್ಲಿ ಸಾರ್ವಜನಿಕರು ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಬೇಕಾದೀತು.
- ಆನಂದು ಪಿ ನಾಯ್ಕ
(ಸಾಮಾಜಿಕ ಕಾರ್ಯಕರ್ತ ಗುಳ್ಳಾಪುರ )