ಅಂಕೋಲಾ: ಹೆಣ್ಣುಮಕ್ಕಳಿಗೆ ಸಾಮಾನ್ಯ ಶೌಚಾಲಯ ಕಲ್ಪಿಸಿಕೊಡುವುದು ಕನಿಷ್ಠ ಮೂಲಭೂತ ಅವಶ್ಯಕತೆಗಳಲ್ಲೊಂದು. ತಾಲೂಕಿನ ಸುಂಕಸಾಳ ಪ್ರೌಢಶಾಲೆಯಲ್ಲಿ ಕಳೆದ 5 ತಿಂಗಳಿಂದ ಹೆಣ್ಣುಮಕ್ಕಳು ಶೌಚಾಲಯ ಇಲ್ಲದೇ ಶೇಡ್ ನೆಟ್ನಿಂದ ನಿರ್ಮಿಸಿದ ಜೋಪಡಿಯನ್ನು ಶೌಚಾಲಯವಾಗಿ ಬಳಸುತ್ತಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ನೈರ್ಮಲ್ಯವನ್ನು ಕಾಪಾಡಿಕೊಂಡು ಮಕ್ಕಳ ದಾಖಲಾತಿಗಳನ್ನು ಹೆಚ್ಚಿಸುವತ್ತ ಗಮನಹರಿಸಲಾಗುತ್ತದೆ. ಆದರೆ ಇಲ್ಲಿ ಸುಂಕಸಾಳ ಪ್ರೌಢಶಾಲೆಯಲ್ಲಿ ಮಕ್ಕಳು ಶೌಚಾಲಯಕ್ಕೆ ತೆರಳಲು ಭಯಪಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ನಿರ್ಮಿಸಿದ್ದ ಶೌಚಾಲಯ ಕಟ್ಟಡವು ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಎಸ್.ಡಿ.ಎಮ್.ಸಿ ಅಧ್ಯಕ್ಷರು ನಾಲ್ಕು ಗುಟ್ಟ ಹುಗಿದು ಶೇಡ್ ನೆಟ್ ನ್ನು ಸುತ್ತುವ ಮೂಲಕ ಮಕ್ಕಳಿಗೆ ತಾತ್ಕಾಲಿಕ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.
ಮೊದಲೇ ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇಲಾಖೆ ಮುಂದಾಗದಿರುವುದು ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತಿವೆ. ಹೆಣ್ಣು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಈ ತಾತ್ಕಾಲಿಕ ಶೆಡ್ ಸೂಕ್ತವಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ. ಈ ಹಿಂದೆ ಶಾಲಾ ಮುಖ್ಯ ಶಿಕ್ಷಕರು, ಎಸ್.ಡಿ.ಎಮ್.ಸಿ ಅಧ್ಯಕ್ಷರು ಗ್ರಾ.ಪಂಕ್ಕೆ, ಸಂಬಂಧಿಸಿದ ಇಲಾಖೆಗಳಿಗೆ ಸಾಕಷ್ಟು ಮನವಿ ಮಾಡಿದರೂ ಆಶ್ವಾಸನೆ, ಭರವಸೆ ನೀಡುವುದನ್ನು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂದೀಪ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಳಿಗ್ಗೆ ವಿಷಯ ತಿಳಿದ ಗ್ರಾ.ಪಂ ಜನಪ್ರತಿನಿಧಿಗಳಾದ ಚಂದು ನಾಯ್ಕ, ನಾಗರಾಜ ಹೆಗಡೆ, ಪ್ರಭಾವತಿ ನಾಯ್ಕ, ಪ್ರವೀಣ ನಾಯರ್ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ಬಳಿಕ ಶಾಸಕರ ಸಂಪರ್ಕಿಸಿ ಇಲ್ಲಿಯ ಸಮಸ್ಯೆ ವಿವರಿಸಿದರು. ಇದಕ್ಕೆ ಸಕಾರಾತ್ಮಕ ಸ್ಪಂದಿಸಿದ ಶಾಸಕರು ಆದಷ್ಟು ಶೀಘ್ರ ಶೌಚಾಲಯ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ 5 ತಿಂಗಳ ಹಿಂದೆಯೇ ಹಳೆಯ ಕಟ್ಟಡವು ಬಿರುಕು ಬಿಟ್ಟು ಶಿಥಿಲಗೊಂಡಿದ್ದವು. ಬಳಿಕ ನಾವುಗಳೇ ಮುಂದೆ ನಿಂತು ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದ್ದೇವೆ. ಬಿಇಓ, ಗ್ರಾ.ಪಂ ಗೆ ಸಾಕಷ್ಟು ಮನವಿ ನೀಡಿದ್ದೇವೆ. ಬರೀ ಆಶ್ವಾಸನೆ, ಭರವಸೆ ನೀಡುತ್ತಾರೆ ಹೊರತು ಯಾರಿಂದಲೂ ಕೆಲಸ ಆಗುತ್ತಿಲ್ಲ. ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
–ರಾಮಚಂದ್ರ ನರಸಿಂಹ ಹೆಗಡೆ
(ಅಧ್ಯಕ್ಷ ಎಸ್.ಡಿ.ಎಮ್.ಸಿ ಸುಂಕಸಾಳ ಪ್ರೌಢಶಾಲೆ)