“ಯೋಗೋ ಯೋಗವಿದಾಂ ನೇತಾ ಪ್ರಧಾನ ಪುರುಷೇಶ್ವರಃ | ನಾರಸಿಂಹವಪುಃ ಶ್ರೀಮಾನ್ | ಕೇಶವಃ ಪುರುಷೋತ್ತಮಃ”
ಭಾವಾರ್ಥ:- ಜ್ಞಾನೇಂದ್ರಿಯಗಳೆಲ್ಲವನ್ನು ಮನಸ್ಸಿನೊಡನೆ ಬಿಗಿಹಿಡಿದುಕೊಂಡ ಕ್ಷೇತ್ರಜ್ಞ, ಮತ್ತು ಆ ಪರಮಾತ್ಮ ಇಬ್ಬರಿಗೂ ಏಕತ್ವವನ್ನು ಭಾವಿಸುತ್ತಿರುವದೇ “ಯೋಗ”ವು. ಆ “ಯೋಗ”ದಿಂದ ಪಡೆಯತಕ್ಕವನೇ ಇವನೇ ಅವನು ಅಂದರೆ ಪರಮಾತ್ಮನು.ಆದ್ದರಿಂದ ಅವನು “ಯೋಗ”ನು ಎಂದು ಯೋಗಜ್ಞರು ಅರಿತುಕೊಂಡಿರುತ್ತಾರೆ. “ಯೋಗವಿದಾಂ ನೇತಾ” ಎಂದರೆ ಇಂದ್ರಿಯ ಪರಮಾತ್ಮನನ್ನು ಪಡೆಯಲು ಯತ್ನಿಸುತ್ತಿರುವ ಮುಮುಕ್ಷುಗಳ ಯೋಗ ಮತ್ತು ಕ್ಷೇಮವನ್ನು ಆ ಈತನು ನೋಡಿಕೊಳ್ಳು ತ್ತಾನೆ.ಅಡಚಣೆ ಗಳೆಲ್ಲವನ್ನು ನಿವಾರಿಸುತ್ತಾನೆ. ಅವರನ್ನು ಸರಿಯಾದ ದಾರಿಯಲ್ಲಿ ಮುನ್ನೆಡೆಸಿಕೊಂಡು ಹೋಗುತ್ತಾನೆ. ಆದ್ದರಿಂದ ಇವನಿಗೆ ಈ ನಾಮ(ಹೆಸರು).ಪ್ರಧಾನವೆಂದರೆ ಪ್ರಕೃತಿ, ಮಾಯೆ. ಪುರುಷನೆಂದರೆ ಜೀವನು. ಆ ಪ್ರಕೃತಿ, ಪುರುಷರಿಗೆ ಇವನು “ಪ್ರಧಾನ’ನು ಅಂದರೆ ಮುಖ್ಯನು ಅಥವಾ ಒಡೆಯನು(ಈಶ್ವರ).ಆದ್ದರಿಂದ “ಪ್ರಧಾನ ಪುರುಷೇಶ್ವರಃ”.ನರನ ಮತ್ತು ಸಿಂಹದ ಅವಯವಗಳು ಯಾವನಲ್ಲಿ ಕಾಣಬರುತ್ತಿರುವವೋ ಆ ವಪು (ಶರೀರವು) ಯಾವನಿಗೆ ಇದೆಯೋ ಅವನೇ ಈ “ನಾರಸಿಂಹವಪುಃ’.ಯಾವಾತನ ಎದೆಯಲ್ಲಿ ಯಾವಾಗಲೂ ಶ್ರೀ(ಲಕ್ಷ್ಮಿ)ಯು ವಾಸ ಮಾಡಿಕೊಂಡಿರುವಳೋ, ಆ (ಈತನು) “ಶ್ರೀಮಾನ್” ಎನಿಸುತ್ತಾನೆ. ಸುಂದರವಾದ ತಲೆಗೂದಲು ಯಾವನಿಗಿವೆಯೋ ಆ ಈತನು”ಕೇಶವ”ನು.ಅಥವಾ “ಕೇಶಿ”ಎಂಬ ರಾಕ್ಷಸನನ್ನು ಕೊಂದದ್ದರಿಂದ” ಕೇಶವ” ಎಂಬ ಹೆಸರು.ಪುರುಷರೊಳಗೆಲ್ಲ ಉತ್ತಮನು ಆದ್ದರಿಂದ ಇವನು “ಪುರುಷೋತ್ತಮ”ನು.
(ಸಂ :ಡಾ. ಚಂದ್ರಶೇಖರ.ಎಲ್. ಭಟ್. ಬಳ್ಳಾರಿ)