ರೈಲ್ವೆ ಸೇವೆ ಉತ್ತಮಗೊಳಿಸುವ ಕುರಿತು ಮನವಿ
ಶಿರಸಿ: ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕರಾವಳಿ, ಚಿಕ್ಕಮಂಗಳೂರು ಸಂಸದರು ಸೇರಿ ದೆಹಲಿಯ ರೈಲ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಬೇಟಿಯಾಗಿ ಕರಾವಳಿ, ಉತ್ತರಕನ್ನಡ ಹಾಗೂ ಚಿಕ್ಕಮಂಗಳೂರು ರೈಲ್ವೇ ಸೇವೆಗಳ ಕುರಿತು ಬಹುಮುಖ್ಯ ಕ್ರಮಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.
ಈಗಾಗಲೆ ರೈಲ್ವೆ ಸಚಿವರಿಗೆ ತಿಳಿದಿರುವ ಕೊಂಕಣ ರೈಲ್ವೆ ವಿಲೀನದ ಕುರಿತು ಮುಂದಿನ ಹಂತದ ಬಗ್ಗೆ ಸಚಿವರ ಜತೆ ಮಾತಾಡುತ್ತ ಪಾಲುದಾರಿಕಾ ರಾಜ್ಯ ಸರಕಾರಗಳಾದ ಕರ್ನಾಟಕ, ಕೇರಳ,ಗೋವಾ, ಮಹಾರಾಷ್ಟ್ರ ಸರಕಾರಗಳ ಶೇರು ಮರು ಖರೀದಿಗೆ ಕಾರ್ಯಪ್ರವ್ರತ್ತರಾಗಲು ಮನವಿ ಮಾಡಲಾಗಿದ್ದು ಸಚಿವರು ಈ ಕುರಿತು ಮಹತ್ವದ ಸೂಚನೆಯನ್ನು ಅದಿಕಾರಿಗಳಿಗೆ ರವಾನಿಸಿದರು. ಕರಾವಳಿಯ ಕಾರವಾರ-ಕುಂದಾಪುರ -ಉಡುಪಿ- ಮಂಗಳೂರು ನಡುವೆ ಜನರ ಬಯಕೆಯಂತೆ ರೈಲು ಓಡಿಸಲು ತೀವ್ರ ಅಡ್ಡಿ ಉಂಟು ಮಾಡಿರುವ ಸಕಲೇಶಪುರ ಘಾಟ್ ಸಮಸ್ಯೆಗೆ ಈಗಾಗಲೆ ಪರಿಣಿತರಿಂದ ಸೂಚಿಸಲ್ಪಟ್ಟ ಪರಿಹಾರವನ್ನು ಸಚಿವರ ಸಮ್ಮುಖದಲ್ಲಿ ಇಡಲಾಗಿದ್ದು, ಅದರಂತೆ ಸಕಲೇಶಪುರ ಸುಬ್ರಮಣ್ಯ ನಡುವೆ ಹಳಿ ದ್ವಿಗುಣ, ಘಾಟ್ ಭಾಗದ ಹರೇ ಬೆಟ್ಟ ನಿಲ್ದಾಣವನ್ನು ಕ್ರಾಸಿಂಗ್ ನಿಲ್ದಾಣವಾಗಿ ಬಳಸುವ ಕುರಿತು ಸವಿಸ್ತಾರವಾಗಿ ಚರ್ಚಿಸಿ ಮಾಡ ಬೇಕಾದ ಸಿದ್ದತೆಗಳಿಗೆ ಸಚಿವರ ಮೂಲಕ ಚಾಲನೆ ನೀಡಲಾಯಿತು. ಘಾಟ್ ಮದ್ಯ ಭಾಗದ ಹರೇ ಬೆಟ್ಟ ಕ್ರಾಸಿಂಗ್ ನಿಲ್ದಾಣವಾಗಿ ಅರಂಭವಾದರೆ ಬೆಂಗಳೂರು ಮಂಗಳೂರು ಕುಂದಾಪುರ ಕಾರವಾರ ನಡುವೆ ಹೊಸ ರೈಲು ಹಾಗು ಹೆಚ್ಚು ಬೋಗಿ ಅಳವಡಿಸಿ ಉತ್ತಮ ಸಮಯ ಪಟ್ಟಿ ರಚಿಸಲು ಸಾದ್ಯವಾಗುತ್ತದೆ.
ಕಾರವಾರ- ಕುಂದಾಪುರ- ಬೆಂಗಳೂರು ನಡುವೆ ಪಂಚಗಂಗಾ ಮಾದರಿಯಲ್ಲಿಯೆ ಆದರೆ ತಡವಾಗಿ ಬೆಂಗಳೂರಿನಿಂದ ಹೋರಡುವ ಹೊಸ ಹೊಸ ಪಡೀಲ್ ಬೈಪಾಸ್ ನೇರ ರೈಲಿಗೆ ಸಚಿವರಿಗೆ ಮನವಿ ಮಾಡಿದರು. ಬೆಂಗಳೂರು ಮುರುಡೇಶ್ವರ ರೈಲಿನ ವಾಸ್ಕೋ ವಿಸ್ತರಣೆ ಮತ್ತು ಅದರಿಂದ ಕರಾವಳಿಗೆ ಸಿಗುವ ಗೋವಾ ವಿಮಾನ ನಿಲ್ದಾಣ ಹಾಗು ವೇಲಾಂಕಣಿ ,ತಿರುಪತಿ,ಉತ್ತರ ಕರ್ನಾಟಕ ಸಂಪರ್ಕದ ಬಗ್ಗೆ ಮನವರಿಕೆ ಮಾಡಿಕೊಟ್ಟರು.ಮತ್ತು ರೈಲು ಸಂಖ್ಯೆ 16585 SMVB ಮುಡೇಶ್ವರ ಎಕ್ಸ್ಪ್ರೆಸ್ ಅನ್ನು ವಾಸ್ಕೋವರೆಗೆ ವಿಸ್ತರಿಸಲು ಹಾಗೂ ರೈಲು ಸಂಖ್ಯೆ 17317/18 ಎಸ್ಪ್ರೆಸ್ಸನ್ನು ಕಾರವಾರದವರೆಗೆ ವಿಸ್ತರಿಸಲು ಮತ್ತು ರೈಲು ಸಂಖ್ಯೆ 17317/18 ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಈ ಸಂದರ್ಭದಲ್ಲಿ ಹುಬ್ಬಳ್ಳಿ ಅಂಕೋಲಾ , ಹಾಗೂ ತಾಳಗುಪ್ಪ ಹುಬ್ಬಳ್ಳಿ ರೈಲ್ವೆ ಮಾರ್ಗಗಳ ಕುರಿತು ಚರ್ಚಿಸಲಾಯಿತು. ಇದಕ್ಕೆ ಸಚಿವರು ಉತ್ತಮ ಸ್ಪಂದನೆ ನೀಡಿ ಆಶ್ವಾಸನೆ ನೀಡಿದ್ದಾರೆಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ,ಮಂಗಳೂರು ಸಂಸದರಾದ ಕಾಪ್ಟನ್ ಬ್ರಿಜೇಶ್ ಚೌಟ, ಬೆಂಗಳೂರು ಗ್ರಾಮಾಂತರ ಸಂಸದರಾದ ಡಾಕ್ಟರ್ ಮಂಜುನಾಥ್ ಜತೆಗಿದ್ದರು.