ಕಾರವಾರ: ಕೊಂಕಣ ರೈಲ್ವೆ ಮತ್ತು ನೌಕಾನೆಲೆ (ಸೀಬರ್ಡ್) ಯೋಜನೆಗೆ ಭೂ ಸ್ವಾಧಿನದ ಬಳಿಕ ಪರಿಹಾರ ಸಿಗದೇ ಇರುವ ನಿರಾಶ್ರಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ನಿರಾಶ್ರಿತರಿಗೆ ನ್ಯಾಯಬದ್ಧ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಿದ್ದ ಕೊಂಕಣ ರೈಲ್ವೆ ಮತ್ತು ನೌಕಾನೆಲೆಯ ನಿರಾಶ್ರಿತರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಜನತೆ ಮಹತ್ವಾಕಾಂಕ್ಷೆ ಯೋಜನೆಗಳಗೆ ತಮ್ಮ ಜಮೀನುಗಳನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ ನಿರಾಶ್ರಿತರಾದ ಜಿಲ್ಲೆಯ ಜನತೆಗೆ ಸೂಕ್ತ ಪರಿಹಾರ ಸಿಗದೇ ಸಮಸ್ಯೆ ಅನುಭವಿಸುತ್ತಿರುವುದರಿಂದ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ಕುಂದುಕೊರತೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕಾಗಿರುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಆ ನಿಟ್ಟಿನಲ್ಲಿ ಜನರ ಕುಂದುಕೊರತೆ ಅಹವಾಲು ಸ್ವೀಕಾರ ಮಾಡಿ, ಸಲ್ಲಿಕೆಯಾಗುವ ಅರ್ಜಿಗಳ ಪಟ್ಟಿ ಮಾಡಿ ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ವಿವಿಧ ಕಾರಣಗಳಿಗಾಗಿ ಭೂ ಸ್ವಾಧೀನ ಪಡೆದ ಭೂಮಿಯ ಪರಿಹಾರ ಪ್ರಕರಣಗಳು ಬೇರೆ ಬೇರೆ ಹಂತದಲ್ಲಿದ್ದು, ಅವುಗಳನ್ನು ಶೀಘ್ರದಲ್ಲಿಯೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದ ಅವರು, ಜಿಲ್ಲಾಧಿಕಾರಿ ನ್ಯಾಯಾಲಯ ಮತ್ತು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿರುವ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಲು ನಿರ್ದೇಶನ ನೀಡಲಾಗುವುದು ಎಂದರು.
ವಕೀಲ ನಾಗರಾಜ ನಾಯಕ ಮಾತನಾಡಿ, ನೌಕಾನೆಲೆಯಲ್ಲಿ ನಿರಾಶ್ರಿತರಿಗೆ ನಿರಾಶ್ರಿತ ಪ್ರಮಾಣ ಪತ್ರದ ಆಧಾರದ ಮೇಲೆ ಎಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸುವವರು ಹೊರ ರಾಜ್ಯದವರಾಗಿದ್ದು, ಸ್ಥಳೀಯರಿಗೆ ಉದ್ಯೋಗದಲ್ಲಿ ಅವಕಾಶ ನೀಡುತ್ತಿಲ್ಲ ಹಾಗೂ ನೌಕಾನೆಲೆಯಲ್ಲಿನ ಹುದ್ದೆಗಳ ಭರ್ತಿ ಸಂಬಂಧ ಹೊರಡಿಸುವ ಅಧಿಸೂಚನೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲೀಷ್ ಪತ್ರಿಕೆಗಳಿಗೆ ನೀಡದೇ ಸ್ಥಳೀಯ ಪತ್ರಿಕೆಗಳಲ್ಲೂ ಜಾಹೀರಾತು ನೀಡಯವಂತಾಗಬೇಕು ಹಾಗೂ ಪರೀಕ್ಷೆಗಳನ್ನು ಮುಂಬಯಿ ಮತ್ತು ಪುಣೆಯಲ್ಲಿ ನಡೆಸಲಾಗುತಿದ್ದು, ಮುಂದಿನ ದಿನಗಳಲ್ಲಿ ಪರೀಕ್ಷೆಗಳನ್ನು ಕಾರವಾರದಲ್ಲಿ ನಡೆಸುವಂತೆ ಮತ್ತು ಪರೀಕ್ಷೆಗಳು ಕನ್ನಡದಲ್ಲಿ ನಡೆಸುವಂತಾಗಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕಾಗೇರಿ, ಸೀಬರ್ಡ್ ನೌಕಾನೆಲೆಯಲ್ಲಿ ಸ್ಥಳೀಯ ನಿರಾಶ್ರಿತರಿಗೆ ನಿರಾಶ್ರಿತ ಪ್ರಮಾಣ ಪತ್ರದ ಆಧಾರದ ಮೇಲೆ ಎಷ್ಟು ಜನರಿಗೆ ಉದ್ಯೋಗದಲ್ಲಿ ಅವಕಾಶ ನೀಡಲಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಅಂಕಿ ಅಂಶ ಪಡೆಯಲಾಗುವುದು ಎಂದ ಅವರು, ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟನಲ್ಲಿ ಕಾರವಾರದಲ್ಲಿ ಪರೀಕ್ಷಾ ಕೇಂದ್ರ ಮತ್ತು ಕನ್ನಡದಲ್ಲಿ ಪರೀಕ್ಷೆ ನಡೆಸುವುದರ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ನೆಲ್ಲೂರು-ಕಂಚಿನಬೈಲು ಗ್ರಾಮಸ್ಥ ಮಾತನಾಡಿ ಭೂ ಸ್ವಾಧೀನಕ್ಕಾಗಿ ಕಾಯ್ದಿರಿಸಿದ ಭೂಮಿಗೆ 5 ವರ್ಷಗಳ ಹಿಂದೆಯೇ ಒಪ್ಪಿಗೆ ಪತ್ರ ಪಡೆದು ಇಲ್ಲಿಯವರೆಗೆ ಪರಿಹಾರವು ನೀಡದೇ ಹಾಗೂ ಜಮೀನಲ್ಲಿ ಕೃಷಿ ಸಾಗುವಳಿ ಮಾಡಲು ನೌಕಾನೆಲೆಯ ಅಧಿಕಾರಿಗಳು ಬೀಡುತ್ತಿಲ್ಲ ಎಂದರು.
ಸೀಬರ್ಡ್ ನಿರಾಶ್ರಿತರಾದವರಿಗೆ ಪರ್ಯಾಯ ಭೂಮಿ ಕಲ್ಪಿಸುವ ಸಂಬಂಧ ಅಂಕೋಲಾ ತಾಲೂಕಿನ ಸಿರಗುಂಜಿಯಲ್ಲಿ ಭೂಮಿಯನ್ನು ಕಾಯ್ದಿರಿಸಿದ್ದು, ಇಲ್ಲಿವರೆಗೆ ರೈತರಿಗೆ ಭೂಮಿ ಹಸ್ತಾಂತರ ಮಾಡಿಲ್ಲ. ರೈತರಿಗೆ ಭೂಮಿ ಹಸ್ತಾಂತರವಾದಲ್ಲಿ ಅನುಕೂಲವಾಗಲಿದೆ ಎಂದು ಸ್ಥಳೀಯರು ಸಂಸದರ ಗಮನಕ್ಕೆ ತಂದರು. ಈ ಬಗ್ಗೆ ನೌಕಾನೆಲೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೆಲ್ಲೂರು- ಕಂಚಿನಬೈಲ್ ಹಾಗೂ ಸಿರುಗುಂಜಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವದು ಎಂದು ಕಾಗೇರಿ ಹೇಳಿದರು.
ನಿರಾಶ್ರಿತರ ಒಕ್ಕೂಟದ ಅಧ್ಯಕ್ಷ ಸುಭಾಷ್ ನಾಯ್ಕ ಮಾತನಾಡಿ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಕರಣಗಳು ಇತ್ಯರ್ಥವಾದರೂ ಪರಿಹಾರ ನೀಡುತ್ತಿಲ್ಲ ಎಂದು ಸಂಸದರ ಗಮನಕ್ಕೆ ತಂದರು.
ಅಸ್ನೋಟಿ ಗ್ರಾಮ ಪಂಚಾಯತ ಅಧ್ಯಕ್ಷ ಸಂಜಯ ಸಾಳುಂಕೆ ಮಾತನಾಡಿ ಕೊಂಕಣ ರೈಲ್ವೆ ನಿರಾಶ್ರಿತರಿಗೆ ರೈಲ್ವೆ ಇಲಾಖೆಯ ಬೇರೆ ಬೇರೆ ಅಧಿಸೂನೆಯಿಂದಾಗಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ ಕೆಲವೊಂದು ಅರ್ಜಿಗಳು ತಿರಸ್ಕೃತವಾಗಿದ್ದು, ಒಂದೇ ಅಧಿಸೂಚನೆಯಲ್ಲಿ ಹೊರಡಿಸಿದ್ದಲ್ಲಿ ನಿರಾಶ್ರಿತರಿಗೆ ಅನುಕೂಲವಾಗಲಿದೆ ಎಂದರು.
ಕಡವಾಡ ಗ್ರಾಮದ ಸುಭಾಷ್ ಮಾತನಾಡಿ ಕಡವಾಡ ಮತ್ತು ಶಿರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊಂಕಣ ರೈಲ್ವೆ ಮಾರ್ಗ ಇರುವುದರಿಂದ ಕೊಂಕಣ ರೈಲ್ವೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಹಾಗೂ ಸಿಎಸ್ಆರ್ ಅನುದಾನದಲ್ಲಿ ಅಭಿವೃದ್ಧಿ ಕೈಗೊಳ್ಳುವಂತೆ ಮನವಿ ಮಾಡಿದರು ಹಾಗೂ ನೌಕಾನೆಲೆಯು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಜೊತೆ ಈ ಹಿಂದೆ ಒಪ್ಪಂದ ಮಾಡಿಕೊಂಡು ಸ್ಥಳೀಯ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು ಆದರೆ ಈಗ ಒಪ್ಪಂದ ರದ್ದಾಗಿದ್ದು ಪುನಃ ನೌಕಾನೆಲೆಯು ಒಪ್ಪಂದ ಮಾಡಿಕೊಂಡು ಸ್ಥಳೀಯ ಯುವಕರಿಗೆ ತರಬೇತಿ ನೀಡಲು ಸೂಚಿಸುವಂತೆ ಸಂಸದರಲ್ಲಿ ಮನವಿ ಮಾಡಿದರು.
ಬಳಿಕ ಮಾತನಾಡಿದ ಸಂಸದ ಕಾಗೇರಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದ್ದು, ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳೂವುದರ ಜೊತೆಗೆ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ , ಸಾರ್ವಜನಿಕರು ಮತ್ತಿತ್ತರರು ಉಪಸ್ಥಿತರಿದ್ದರು.