ಸಿದ್ದಾಪುರ : ಇತ್ತೀಚೆಗೆ ತಾಲೂಕಿನ ಹೇರೂರು ಸಮೀಪ ನೆಲಮಾವು ಮಠದಲ್ಲಿ ನಡೆದ ಬೃಹತ್ ವೃಕ್ಷಾರೋಪಣ ಶಿಬಿರದಲ್ಲಿ, ಶ್ರೀಮಠದ ಭಕ್ತರು ಹಣ್ಣು,ಸಂಬಾರು ವೃಕ್ಷಗಳನ್ನು ನೆಲಮಾವು ಕೃಷಿಕ್ಷೇತ್ರದಲ್ಲಿ ನೆಟ್ಟರು.
ಈ ಸಂದರ್ಭದಲ್ಲಿ ನಡೆದ ಹಸಿರು ಸಮಾರಂಭದಲ್ಲಿ ಶ್ರೀಮನ್ನೆಲೆಮಾವು ಮಠದ ಪರಮಪೂಜ್ಯ ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ರೈತರ ಸಂಕಷ್ಟದಲ್ಲಿ ಇದ್ದಾರೆ. ಅತಿವೃಷ್ಟಿ, ಅನಾವೃಷ್ಟಿ ಬಾಧಿಸುತ್ತಿದೆ. ವನ್ಯ ಪ್ರಾಣಿಗಳ ಹಾವಳಿ ಹೆಚ್ಚಿದೆ. ಸರ್ಕಾರ ನೆರವಿಗೆ ಬರಬೇಕು. ನಮ್ಮ ನದೀ ತೀರ ಹಸಿರಿನಿಂದ ತುಂಬಲು ಶ್ರೀ ಮಠದ ಕೃಷಿ ಕ್ಷೇತ್ರ ಬೆಟ್ಟ ಅಭಿವೃದ್ಧಿಗೆ ಎಲ್ಲರ ಬೆಂಬಲ ಬೇಕು ಎಂದು ನುಡಿದು, ವೃಕ್ಷರೋಪಣಕ್ಕೆ ಚಾಲನೆ ನೀಡಿ ದಾಲ್ಚಿನ್ನಿ, ಕಂಬಿ, ಲವಂಗ ಮುಂತಾದ ಸಸಿ ನೆಟ್ಟರು.
ವೃಕ್ಷಾರೋಪಣ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಅನಂತ ಹೆಗಡೆ ಅಶೀಸರ ಅವರು, ಈ ಹಿಂದೆ ನೆಲಮಾವು ಮಠದ ಬೆಟ್ಟ ಸಮೀಕ್ಷೆ ನಡೆದಿದೆ. ಬೆಟ್ಟ ರಕ್ಷಣಾ ಯೋಜನೆಗೆ ಈ ವರ್ಷವೇ ಕ್ರಿಯಾ ಯೋಜನೆ ರೂಪಿಸಬೇಕು. “ಬ” ಖರಾಬು ಎಂದು ಬೆಟ್ಟ ಭೂಮಿ ಘೋಷಿಸಿರುವುದು ತಪ್ಪು ಕ್ರಮ. ಇದನ್ನು ಅರಣ್ಯ ಮತ್ತು ಕಂದಾಯ ಇಲಾಖೆಗಳು ಸೇರಿ ಸರಿಪಡಿಸಬೇಕು ಎಂದು ಅಭಿಪ್ರಾಯ ಪಟ್ಟರು. ಸೋಲಾರ್ ಬೇಲಿ ನಿರ್ಮಿಸಲು ರೈತರಿಗೆ ಅರಣ್ಯ ಇಲಾಖೆ ಬೆಂಬಲ ನೀಡಬೇಕು ಎಂದರು.
ಶಿರಸಿ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ| ಅಜ್ಜಯ್ಯ ಅವರು ಬೆಟ್ಟ ರಕ್ಷಣಾ ಯೋಜನೆಗೆ ಸಹಕಾರ ನೀಡುತ್ತೇವೆ. ಸೋಲಾರ್ ಬೇಲಿ ನಿರ್ಮಿಸಲು ಎಲ್ಲಾ ಸಹಾಯ ನೀಡುತ್ತೇವೆ ಎಂದು ಭರವಸೆ ನೀಡಿದರು. ಪ್ರಗತಿಪರ ಕೃಷಿಕ ವನ್ಯಜೀವಿ ತಜ್ಞ ಡಾ.ಬಾಲಚಂದ್ರ ಸಾಯಿಮನೆ, ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ, ಫಲವೃಕ್ಷ ಯೋಜನೆ ಜಾರಿ ಆಗಬೇಕು ಎಂದರು. ಶ್ರೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ಹೆಗಡೆ ಅತಿಥಿಗಳನ್ನು ಗೌರವಿಸಿದರು.