ಶಿರಸಿ: ಎಲೆಚುಕ್ಕೆ ರೋಗವು ಅಡಕೆ ಬೆಳೆಗೆ ಮಾರಕ ರೋಗವಾಗಿದೆ. ಹಾಗೆಂದ ಮಾತ್ರಕ್ಕೆ ರೈತರು ಹತಾಶರಾಗಿ ಕೈ ಕಟ್ಟಿ ಕುಳಿತುಕೊಳ್ಳಬೇಕಾಗಿಲ್ಲ. ಈ ಬಗ್ಗೆ ಜಾಗೃತೆ ವಹಿಸಬೇಕೆಂದು ವಿಟ್ಲದ ತೋಟಗಾರಿಕಾ ಸಂಶೋಧನಾ ಕೇಂದ್ರದ(ಸಿ.ಪಿ.ಸಿ.ಆರ್.ಐ) ವಿಜ್ಞಾನಿ ಡಾ. ವಿನಾಯಕ ಹೆಗಡೆ ಹೇಳಿದರು.
ಅವರು ಇತ್ತೀಚೆಗೆ ದೇವನಳ್ಳಿಯ ವೀರಭದ್ರ ದೇವಾಲಯದ ಸಭಾಭವನದಲ್ಲಿ ತೋಟಗಾರಿಕಾ ಇಲಾಖೆ, ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ, ಬೆಳೆಸಿರಿ ರೈತ ಉತ್ಪಾದಕ ಕಂಪನಿ ಮತ್ತಿಘಟ್ಟ ಇವರು ಜಂಟಿಯಾಗಿ ಆಯೋಜಿಸಿದ್ದ “ಅಡಿಕೆ ಎಲೆಚುಕ್ಕೆ ರೋಗದ ಕುರಿತು ಮಾಹಿತಿ ಹಾಗೂ ಜಾಗೃತಿ” ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಹಾಗೆಯೇ ಮುಂದುವರಿದು, ಎಲೆಚುಕ್ಕೆ ರೋಗ ಬಹಳ ಕಾಲದಿಂದಲೂ ಬೇರೆ ಬೇರೆ ಜಿಲ್ಲೆಯಲ್ಲಿ ವ್ಯಾಪಿಸಿದ್ದು ಈಗ ಉತ್ತರಕನ್ನಡ ಜಿಲ್ಲೆಯಲ್ಲೂ ತೀವೃತರವಾಗಿ ಹರಡುತ್ತಿದೆ ಎಂದರು.
ಎಲೆಚುಕ್ಕೆ ರೋಗ ಪೀಡಿತ ರೈತರು ಮೊದಲು ತಮ್ಮ ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದರ ಫಲಿತಾಂಶದ ಮೇಲೆ ಯಾವ ಯಾವ ಪೋಷಕಾಂಶವನ್ನು ಮಣ್ಣಿಗೆ ಕೊಡಬೇಕೆಂದು ನಿರ್ಧರಿಸಿ ಹಾಗೆಯೇ ಮಾಡಬೇಕೆಂದರು. ಅಲ್ಲದೇ ಬೊರ್ಡೋ ಮಿಶ್ರಣವನ್ನು ಅಡಕೆ ಹೆಡೆಗಳಿಗೆ ಸಿಂಪಡಿಸಬೇಕು. ಹಾಗೂ ಇನ್ನೂ ಯಾವ ಯಾವ ರೀತಿ ಉಪಚಾರಗಳನ್ನು ಮಾಡಬಹುದೆಂದು ವಿವರಿಸಿದರು.
ಆದಾಗ್ಯೂ ಅಡಕೆ ಬೆಳೆಯುವ ಕ್ಷೇತ್ರ ಇತ್ತೀಚೆಗೆ ಅತೀ ಹೆಚ್ಚು ಆಗುತ್ತಿರುವುದರಿಂದ, ರೈತರು ಅಡಕೆಯ ಜೊತೆ ಉಪ ಬೆಳೆಯನ್ನು ಬೆಳೆಯಲು ಮುಂದಾಗಬೇಕೆಂದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸತೀಶ ಹೆಗಡೆಯವರು ಮಾತನಾಡಿ ಯಾವ ಯಾವ ಉಪ ಬೆಳೆಯನ್ನು ನಮ್ಮ ಪ್ರದೇಶದಲ್ಲಿ ಬೆಳೆಯಬಹುದೆಂದು ವಿವರಿಸಿದರು. ಅಲ್ಲದೇ ಅಡಿಕೆಯನ್ನು ಬೆಳೆಯುವ ಪ್ರದೇಶ ಜೌಗು ಪ್ರದೇಶವಾಗಿದ್ದರೆ ಬೇಗ ಈ ರೋಗ ಹರಡುತ್ತದೆ ಎಂದರು. ಮತ್ತು ಯಾವ ಯಾವ ಸಮಯದಲ್ಲಿ ಅಡಿಕೆ ತೋಟಕ್ಕೆ ನೀರನ್ನು ಉಣಿಸಬಹುದೆಂದರು. ಅಲ್ಲದೇ ಸದ್ಯ ಅಡಿಕೆ ಬೆಳೆಗೆ ಬೇಕಾಗುವ ಬೊರ್ಡೊ ಮಿಶ್ರಣ ಅಥವಾ ಕ್ರಿಮಿನಾಶಕಗಳನ್ನು ರೈತರು ಖರೀದಿಸಿ ಸರಿಯಾದ ಕ್ರಮದಲ್ಲಿ ಬಿಲ್‌ನ್ನು ಪೂರೈಸಿದರೆ ಸರಕಾರದಿಂದ ಹೆಕ್ಟೇರಿಗೆ 7500/-ಗಳವರೆಗೆ ಧನಸಹಾಯ ನೀಡುತ್ತೇವೆಂದು ಆಶ್ವಾಸನೆ ನೀಡಿದರು.
ಸಭೆಯ ಅಧ್ಯಕ್ಷತೆವಹಿಸಿದ್ದ ಮುಂಡಗನಮನೆ ಸೊಸೈಟಿ ಹಾಗೂ ಟಿ.ಎಸ್.ಎಸ್. ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಎಲೆಚುಕ್ಕೆ ರೋಗದಿಂದ ರೈತರು ಎದೆಗುಂದಬಾರದು. ಇದಕ್ಕೆ ತಕ್ಕದಾದ ಔಷಧೋಪಚಾರವನ್ನು ಮಾಡಿದಲ್ಲಿ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು. ಇದಕ್ಕೆ ಉದಾಹರಣೆ ಎಂದರೆ ಬೆಣಗಾಂವ ಗ್ರಾಮದ ರೈತ ಕರುಣಾಕರ ಹೆಗಡೆಯವರಾಗಿದ್ದಾರೆಂದರು. ಅಲ್ಲದೇ ನಮ್ಮ ಸ್ಥಳೀಯ ಸಹಕಾರಿ ಸಂಘ ಹಾಗೂ ರೈತ ಉತ್ಪಾದಕ ಕಂಪನಿಯವರು ತೋಟಗಾರಿಕಾ ಇಲಾಖೆಯ ಸಹಕಾರದಿಂದ ರೋಗ ಪೀಡಿತ ಎಲ್ಲಾ ರೈತರನ್ನು ಸಂಪರ್ಕಿಸಿ ಅವರಿಗೆ ಪರಿಹಾರವನ್ನು ಸೂಚಿಸಿದ್ದೇವೆ. ಇನ್ನೂ ಮುಂದೆಯೂ ರೈತರ ಹಿತ ಕಾಪಾಡಲು ನಾವು ಬದ್ದರೆಂದರು. ಅಲ್ಲದೇ ಇತ್ತೀಚೆಗೆ ಅಡಿಕೆ ದರ ಕುಸಿತ ಕಾಣುತ್ತಿದೆ. ಇದಕ್ಕೆ ಟಿ.ಎಸ್.ಎಸ್. ಅಧ್ಯಕ್ಷನಾಗಿ ನಾನು ರಾಜ್ಯದ ಎಲ್ಲಾ ಹಿರಿಯ ಸಹಕಾರಿಗಳ ಜೊತೆ ಸೇರಿ ನಾವೆಲ್ಲ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡುತ್ತಿದ್ದೇವೆ. ಅಲ್ಲದೇ ಸಂಸತ್ ಕಲಾಪ ಪ್ರಾರಂಭವಾದ ಕೂಡಲೇ ದಿಲ್ಲಿಗೆ ಹೋಗಿ ಸರಕಾರದ ಗಮನವನ್ನು ಅಡಿಕೆ ಬೆಳೆಗಾರರ ಬಗ್ಗೆ ಸೆಳೆಯುತ್ತೇವೆಂದರು.
ಮತ್ತು ಹಿಂದಿನಿಂದಲೂ ಅಡಿಕೆ ಜೊತೆ ಕಾಳುಮೆಣಸು, ಯಾಲಕ್ಕಿ, ಬಾಳೆ ಬೆಳೆಯನ್ನು ಸಾಂಪ್ರದಾಯಿಕವಾಗಿ ಬೆಳೆಯುತ್ತ ಬಂದಿದ್ದೇವೆ. ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಹಾಗೂ ತಾನು ಕಳೆದ ಹಂಗಾಮಿನಲ್ಲಿ ವೆನಿಲ್ಲಾ ಬೆಳೆಯನ್ನೂ ತೋಟದ ಮಧ್ಯೆ ಬೆಳೆದು ಲಾಭಗಳಿಸಿದ್ದನ್ನು ಉದಾಹರಿಸಿದರು. ಆದರೆ ರೈತರು ತಮ್ಮ ಅಡಿಕೆ ಬೆಳೆ ಕೈ ಸೇರಿದ ಕೂಡಲೇ ಅದನ್ನು ಮಾರಾಟ ಮಾಡಬೇಕು. ಹಾಗಿದ್ದರೆ ಮಾತ್ರ ಬೆಲೆಯಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವೆಂದು ರೈತರಿಗೆ ಕಿವಿಮಾತು ಹೇಳಿದರು.
ಬೆಣಗಾಂವ ಗ್ರಾಮದ ರೈತ ಕರುಣಾಕರ ಹೆಗಡೆಯವರು ಮಾತನಾಡಿ ತಾನು ಕಳೆದ ವರ್ಷದಲ್ಲಿ ಅಡಿಕೆ ಎಲೆಚುಕ್ಕೆ ರೋಗದಿಂದ ಹತಾಶೆಯಾಗಿದ್ದೆ, ಆದರೆ ಸೊಸೈಟಿ ಹಾಗೂ ರೈತ ಉತ್ಪಾದಕ ಕಂಪನಿ. ತೋಟಗಾರಿಕಾ ಇಲಾಖೆಯ ಪ್ರೋತ್ಸಾಹದಿಂದ ಆ ರೋಗ ಸಂಪೂರ್ಣವಾಗಿ ನಿಯಂತ್ರಣ ಮಾಡಿದ ಬಗ್ಗೆ ವಿವರಿಸಿದರು.
ಆರಂಭದಲ್ಲಿ ಮುಂಡಗನಮನೆ ಸೊಸೈಟಿ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಬೆಳೆಸಿರಿ ರೈತ ಉತ್ಪಾದಕ ಕಂಪನಿ ಮತ್ತಿಘಟ್ಟಾದ ಅಧ್ಯಕ್ಷ ಶ್ರೀಪಾದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗರಾಜ ಮರಾಠಿ ಹಾಗೂ ತೋಟಗಾರಿಕಾ ಇಲಾಖೆಯ ಆರ್ಷ್ಯಾ ಉಪಸ್ಥಿತರಿದ್ದರು. ಮುಂಡಗನಮನೆ ಸೊಸೈಟಿ ಮಾಜಿ ಕಾರ್ಯದರ್ಶಿ ವಿ.ಆರ್. ಹೆಗಡೆ ಆಭಾರವಂದನೆ ಮಾಡಿದರೆ, ಮುಖ್ಯ ಕಾರ್ಯನಿರ್ವಾಹಕ ನಾಗಪತಿ ಭಟ್ಟ ನಿರ್ವಹಿಸಿದರು.
ಸಭೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು. ಹೆಗಡೆಕಟ್ಟಾ, ಮೆಣಸಿ, ಶೀಗೆಹಳ್ಳಿ, ಸಾಲ್ಕಣಿ ಹೀಗೆ ಬೇರೆ ಬೇರೆ ಪ್ರದೇಶದ ರೈತರು ಭಾಗಿಯಾಗಿದ್ದರು.