ಶಿರಸಿ: ರಕ್ತದಾನ ಮಾಡುವುದು ಪುಣ್ಯದ ಕೆಲಸ. ಹಾಗಾಗಿ ಯುವಕರಾದ ನೀವೆಲ್ಲ ಅವಶ್ಯಕತೆಗೆ ತಕ್ಕ ಹಾಗೆ ರಕ್ತದಾನವನ್ನು ಮಾಡಿದರೆ ಅನೇಕರ ಪ್ರಾಣ ಉಳಿಸಲು ಸಾಧ್ಯ. ಆ ಪುಣ್ಯ ನಿಮ್ಮದಾಗುತ್ತದೆ. ಇಂದು ಯುವಕರು ಕೆಟ್ಟ ಚಟಗಳಿಗೆ ದಾಸರಾಗುತ್ತಿರುವುದು ಕಂಡು ಬರುತ್ತಿದೆ. ಜೀವನದಲ್ಲಿ ಜಂಕ್ ಫುಡ್ ತಿನ್ನುವುದೇ ಹೆಚ್ಚಾಗಿದ್ದು, ಸರಿಯಾದ ಸಮಯದಲ್ಲಿ ಉತ್ತಮ ಆಹಾರವನ್ನು ತಿನ್ನದಿರುವುದು ಕಂಡು ಬರುತ್ತಿದೆ. ದೇಹ ಆರೋಗ್ಯ ಪೂರ್ಣವಾಗಿರಲು ಬೇಕಾದ ವ್ಯಾಯಾಮ ಕೊಟ್ಟು ನಿಟ್ಟಿನ ಜೀವನ ಕ್ರಮ ಯುವಕರಲ್ಲಿ ಮಾಯವಾಗಿದ್ದು ಇದೆಲ್ಲ ನೀವು ಮಾಡುತ್ತಿರುವ ಪಾಪದ ಕೆಲಸ ಎಂದು ಟಿಎಸ್ಎಸ್ ಆಸ್ಪತ್ರೆ ರಕ್ತ ನಿಧಿ ಘಟಕದ ಮುಖ್ಯಸ್ಥ ಡಾ.ಪಿ.ಎಸ್. ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್ಎಸ್ಎಸ್, ರೆಡ್ ಕ್ರಾಸ್, ಎನ್‌ಸಿಸಿ, ಸ್ಕೌಟ್ಸ್ ಗೈಡ್ಸ್ ಘಟಕಗಳು ಟಿಎಸ್ಎಸ್ ಆಸ್ಪತ್ರೆ ರಕ್ತ ನಿಧಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತ ಗುಂಪು ವಿಂಗಡಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
18 ವರ್ಷದಿಂದ ಮೇಲ್ಪಟ್ಟು 65 ವರ್ಷದ ಒಳಗಿನ ಎಲ್ಲಾ ಆರೋಗ್ಯಪೂರ್ಣ ವ್ಯಕ್ತಿಗಳು ರಕ್ತದಾನವನ್ನ ಮಾಡಬಹುದು. ರಕ್ತದಾನ ಮಾಡುವುದರಿಂದ ದಪ್ಪವಾಗುತ್ತಾರೆ ಎಂಬ ಅನುಮಾನ ಕೆಲವರಲ್ಲಿ ಇದ್ದು, ಇದು ತಪ್ಪಾಗಿದ್ದು ರಕ್ತದಾನದಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗದು, ದಪ್ಪವೂ ಆಗಲಾರಿರಿ. ಗಂಡು ಮಕ್ಕಳು ಮೂರು ತಿಂಗಳಿಗೊಮ್ಮೆ ಹೆಣ್ಣುಮಕ್ಕಳು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಗೆ ಸಹಾಯವಾಗುತ್ತದೆ. ನೀವು ರಕ್ತದಾನ ಮಾಡುವುದಲ್ಲದೆ ಉಳಿದವರಿಗೂ ರಕ್ತದ ಅಗತ್ಯತೆ ಇದ್ದಾಗ ಬಂದು ದಾನ ಮಾಡಲು ಪ್ರೇರೇಪಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಜಿ.ಟಿ.ಭಟ್ ಸ್ವಾಗತಿಸಿ ಮಾತನಾಡಿ 2001ರಲ್ಲಿ ನಮ್ಮ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ಸಾಮ್ರಾಟ್ ಹೋಟೆಲ್ ನಲ್ಲಿ ಮೊದಲ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಅಂದಿನಿಂದ ಪ್ರತಿವರ್ಷ ನಿರಂತರವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡು ಬಂದಿದ್ದೇವೆ. ರಕ್ತದಾನ ಮಾಡುವುದು ಉತ್ತಮವಾದ ಹವ್ಯಾಸ. ಇನ್ನೊಂದು ಜೀವಕ್ಕೆ ಮರು ಜೀವ ನೀಡುವ ಕೆಲಸ ಎಂದರು. ಕಾಲೇಜಿನ ಅನೇಕ ವಿದ್ಯಾರ್ಥಿಗಳು ರಕ್ತದಾನವನ್ನ ಮಾಡಿದರು. ಈ ಸಂದರ್ಭದಲ್ಲಿ ಎನ್ಎಸ್ಎಸ್ ಅಧಿಕಾರಿ ಆರ್ ವೈ ಕೊಳೆಕರ್, ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ರಾಘವೇಂದ್ರ ಹೆಗಡೆ, ಪ್ರಾಣಿ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾಕ್ಟರ್ ಎಸ್ ಎಸ್ ಭಟ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು