ಬೆಂಗಳೂರು: ಕಲಾವಿದನು ತಪಸ್ವಿಯಿದ್ದಂತೆ. ಶ್ರದ್ಧೆ ಹಾಗೂ ನಿರಂತರ ಪ್ರಯತ್ನದಿಂದ ಮಾತ್ರವೇ ಕಲಾವಿದನಾಗಲು ಸಾಧ್ಯ ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಎಂ.ಪಿ.ಹೆಗಡೆ ಪಡಿಗೆರೆ ಹೇಳಿದರು.
ಬೆಂಗಳೂರಿನಲ್ಲಿ ಸಾಯಿ ಶ್ರುತಿ ಸಂಗೀತ ವಿದ್ಯಾಲಯ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗೌರವವನ್ನು ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಸ್ವಲ್ಪವೇ ಕಲಿತು, ದೊಡ್ಡಮಟ್ಟದ ಯಶಸ್ಸನ್ನು ಪಡೆಯಲು ಬಯಸುವವರೇ ಹೆಚ್ಚು. ಹಾಗೆ ಮಾಡಿದರೆ ಸಿಗುವ ಕೀರ್ತಿ ಅಲ್ಪಕಾಲೀನವಾಗಿರುವುದು ಎಂಬುದನ್ನು ಮರೆಯಬಾರದು ಎಂದು ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಿವಿಮಾತು ಹೇಳಿದರು.
ಗುರುವಿಗೆ ವಿಧೇಯರಾಗಿದ್ದು, ನಿರಂತರವಾಗಿ ಕಲಿಕೆಯನ್ನು ಮುಂದುವರೆಸಿದರೆ ಮಾತ್ರವೇ ಶಾಸ್ತ್ರೀಯ ಸಂಗೀತವು ಕರಗತವಾಗಬಲ್ಲದು ಎಂದೂ ಹೇಳಿದರು.
ಇದೇ ಸಂದರ್ಭದಲ್ಲಿ ತಬಲಾ ಗುರು ಪಂ. ಗುರುಮೂರ್ತಿ ವೈದ್ಯ ಅವರಿಗೂ ಕೂಡ ವಿದ್ಯಾಲಯದ ವತಿಯಿಂದ ಗುರುವಂದನೆಯನ್ನು ಸಲ್ಲಿಸಲಾಯಿತು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಂ.ಎಂ ಪಿ.ಹೆಗಡೆ ಪಡಿಗೆರೆ ಅವರು ರಾಗ್ ಪೂರಿಯಾ ಕಲ್ಯಾಣ್, ತಿಲಕ್ ಕಾಮೋದ್, ಕಾಮೋದ್ ಅನ್ನು ಪ್ರಸ್ತುತಪಡಿಸಿದರು. ನಂತರ ಅವರು ಹಾಡಿದ ನಾಟ್ಯಗೀತೆ, ದಾದರಾ ಹಾಗೂ ಸಾಯಿ ಭಜನ್ ಗಳು ಜನಮನವನ್ನು ರಂಜಿಸಿದವು. ಅವರಿಗೆ ಪಂ. ಗುರುಮೂರ್ತಿ ವೈದ್ಯ ತಬಲಾದಲ್ಲಿ ಹಾಗೂ ವಿದ್ವಾನ್ ಮಧುಸೂದನ್ ಭಟ್ ಅವರು ಹಾರ್ಮೋನಿಯಂ ನಲ್ಲಿ ಸಾಥ್ ನೀಡಿದರು. ಇದಕ್ಕೂ ಮುನ್ನ ವಿದ್ಯಾಲಯದ ಗುರು ಶ್ರುತಿ ನಿರಂಜನ್ ರಾಗ್ ಮುಲ್ತಾನಿಯನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ಇವರಿಗೆ ನಿರಂಜನ್ ಭಟ್ ತಬಲಾದಲ್ಲಿ ಸಹಕರಿಸಿದರು.
ಮೂಲತಃ ಸ್ವರ್ಣವಲ್ಲಿಯವರಾದ ಶ್ರೀಮತಿ ಶ್ರುತಿ ನಿರಂಜನ್ ಅವರು ಪಂ.ಎಂ.ಪಿ.ಹೆಗಡೆ ಪಡಿಗೆರೆ ಅವರ ಶಿಷ್ಯರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸಾಯಿ ಶ್ರುತಿ ಸಂಗೀತ ವಿದ್ಯಾಲಯವನ್ನು ಪ್ರಾರಂಭಿಸಿ ಹಲವಾರು ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಸಂಗೀತವನ್ನು ಕಲಿಸುತ್ತಿದ್ದಾರೆ ಎಂಬುದು ಉಲ್ಲೇಖನೀಯ.
ಅವರ ಸಂಪರ್ಕ ಸಂಖ್ಯೆ : 8618468230