ದಾಂಡೇಲಿ: ಮುಸ್ಲಿಂ ಧರ್ಮ್ಯರ ಪವಿತ್ರ ಹಬ್ಬವಾದ ಈದ್ ಮಿಲಾದ್ ಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ಶಾಂತಿ ಸೌಹಾರ್ದತೆಯಿಂದ ಆಚರಿಸಲು ಈಗಾಗಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದ್ದು ಮತ್ತು ಹಬ್ಬದ ಆಚರಣೆಗೆ ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ನಗರದ ಅಂಜುಮನ್ ಅಹಲ್ಲೇ ಸುನ್ನತ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಶೇಖ ಹೇಳಿದರು.
ಅವರು ಶನಿವಾರ ನಗರದ ನೂರು ಇಸ್ಲಾಂ ಟ್ರಸ್ಟ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದೇ ಸೆ:16ರ ಸೋಮವಾರದಂದು ಬೆಳಿಗ್ಗೆ 10.30 ಗಂಟೆಯೊಳಗೆ ನಗರದ ಎಲ್ಲ ಮಸೀದಿಗಳ ಮುಸ್ಲಿಂ ಬಾಂಧವರು ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ನಂತರ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಮೆರವಣಿಗೆ ಮುಗಿದ ಬಳಿಕ ಬಾಂಬೆಚಾಳದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ ಸುಮಾರು 8-10 ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯಾಯ ಪ್ರದೇಶದ ಮುಸ್ಲಿಂ ಸಂಘಟನೆಗಳ ಮೂಲಕ ಏರ್ಪಡಿಸಲಾಗಿದೆ ಎಂದು ಇಕ್ಬಾಲ್ ಶೇಖ ಹೇಳಿದರು.
ಈ ಬಾರಿಯ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಡಿಜೆ ಮತ್ತು ದ್ವಿಚಕ್ರ ವಾಹನಗಳನ್ನು ಬಳಸದಂತೆ ಸೂಚನೆಯನ್ನುನೀಡಲಾಗಿದೆ. ಮೆರವಣಿಗೆಗೆ ಕಾಲ್ನಡಿಗೆಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಆಯಾಯ ಮಸೀದಿಗಳ ತಂಡಕ್ಕೆ ಶಿಸ್ತು ವೇಷಭೂಷಣ, ಅಲಂಕಾರ ಇವೆಲ್ಲವುಗಳನ್ನು ಮಾನದಂಡವಾಗಿಟ್ಟುಕೊಂಡು ಬಹುಮಾನವನ್ನು ನೀಡಲಾಗುತ್ತದೆ. ಈದ್ ಮಿಲಾದ್ ಹಬ್ಬದ ದಿನದಂದು ಸಾರ್ವಜನಿಕ ಗಣಪತಿ ಮಂಡಳದ ಹತ್ತಿರ ಮುಸ್ಲಿಂ ಧರ್ಮ ಬಾಂಧವರು ಯಾವುದೇ ಬ್ಯಾನರ್ -ಬಂಟಿಂಗ್ಸ್ ಹಾಕದಂತೆ ಸ್ಪಷ್ಟ ಆದೇಶವನ್ನು ನೀಡಲಾಗಿದೆ. ಭಾವೈಕ್ಯತೆಯನ್ನು ಸಾರುವ ಈ ಹಬ್ಬವನ್ನು ಸಂಭ್ರಮ, ಸಡಗರದ ಜೊತೆಗೆ ಸರ್ವ ಧರ್ಮ ಸಮನ್ವಯತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಆಚರಿಸುವಲ್ಲೂ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಇಕ್ಬಾಲ್ ಶೇಖ ಅವರು ಹೇಳಿದರು.
ಮುಖಂಡರಾದ ದಾದಾಪೀರ್ ನದಿಮುಲ್ಲಾ ಅವರು ಮಾತನಾಡಿ ಸಂಸ್ಥೆಯ ಪ್ರಮುಖರು ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ ಯುವಕರಿಗೆ ಸೌಹಾರ್ದತೆಯ ಸಂದೇಶ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಸರ್ವಧರ್ಮಿಯರು ಪರಸ್ಪರ ಸಹೋದರತ್ವದಿಂದ ಬಾಳಲು ನೆರವಾಗತ್ತದೆ ಎಂದರು.
ಸೆಂಟ್ರಲ್ ಈದ್ ಮಿಲಾದ್ ಕಮಿಟಿಯ ಅಧ್ಯಕ್ಷರಾಗಿ ವ್ಯಾಪಾರೋದ್ಯಮಿ ಓಬೆದುಲ್ಲಾ ಖಾನ್ ಮತ್ತು ಅರೆಬಿಕ್ ಶಾಲೆಯ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿಯ ಅಧ್ಯಕ್ಷರಾಗಿ ಪ್ರವಾಸೋದ್ಯಮಿ ಉಸ್ಮಾನ್ ಮುನ್ನಾ ವಹಾಬ್ ಅವರನ್ನು ಆಯ್ಕೆ ಮಾಡಲಾಗಿರುವುದನ್ನು ಸುದ್ದಿಗೋಷ್ಠಿಯಲ್ಲಿ ಇಕ್ಬಾಲ್ ಶೇಖ ಅವರು ತಿಳಿಸಿದರು
ಈ ಸಂದರ್ಭದಲ್ಲಿ ಸೆಂಟ್ರಲ್ ಈದ್ ಮಿಲಾದ್ ಕಮಿಟಿಯ ಅಧ್ಯಕ್ಷ ಓಬೆದುಲ್ಲಾ ಖಾನ್, ಅರೆಬಿಕ್ ಶಾಲೆಯ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿಯ ಅಧ್ಯಕ್ಷ ಉಸ್ಮಾನ್ ಮುನ್ನಾ ವಹಾಬ್, ಅಂಜುಮನ್ ಅಹಲ್ಲೇ ಸುನ್ನತ್ ಸಂಸ್ಥೆಯ ಅಧ್ಯಕ್ಷರಾದ ನವಾಜ್ ಕರೀಮ್ ಖಾನ್, ಪ್ರಮುಖರಾದ ಇಮ್ಮಿಯಾಜ್ ಅತ್ತಾರ್, ರಾಜಾ ಸುಂಕದ, ರಫೀಕ್ ಹುದ್ದಾರ್, ಜಿಲಾನಿ ಬಡಿಗೇರ್, ಸುಲೇಮಾನ್ ಶೇಖ್, ತೌಸಿಫ್ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು