ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಆಯುಷ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡಲು ಕಷ್ಟ ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಕೂಡಲೇ ಆಯುಷ್ ಆಸ್ಪತ್ರೆಗೆ ಕೊರತೆ ಇರುವ ಸಿಬ್ಬಂದಿಗಳ ನೇಮಕಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆ ಮತ್ತು ಅಂಬೇಡ್ಕರ್ ಅಭಿಮಾನಿ ಸೇನೆ ಭೀಮ ಧ್ವನಿ ಸಂಘಟನೆಯೂ ಜಂಟಿಯಾಗಿ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮಂಗಳವಾರ ಲಿಖಿತ ಮನವಿಯನ್ನು ನೀಡಿತು.
ಮನವಿಯಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಅಂಕೋಲಾ, ಶಿರಸಿ ಮುಂಡಗೋಡ ಹಾಗೂ ದಾಂಡೇಲಿಯ ಆಯುಷ್ ಆಸ್ಪತ್ರೆಯಲ್ಲಿ ದಿನಾಂಕ 21-10-2023 ರಂದು ವಿವಿಧ ಹುದ್ದೆಗಳ ನೇಮಕಾತಿಗಾಗಿ ಆದೇಶವನ್ನು ಹೊರಡಿಸಿದ್ದರು. ಕುಮಟಾ, ಅಂಕೋಲಾ, ಶಿರಶಿ, ಮುಂಡಗೋಡ ತಾಲೂಕುಗಳಿಗೆ ದಿನಾಂಕ 03-03-2024ರಂದು ಸಿಬ್ಬಂದಿಗಳನ್ನು ನೇಮಕಾತಿ ಮಾಡಿ ಅವರಿಗೆ ಆದೇಶ ಪತ್ರವನ್ನು ನೀಡಲಾಗಿತ್ತು. ಆದರೆ ದಾಂಡೇಲಿಯ ಆಯುಷ್ ಆಸ್ಪತ್ರೆಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳದೆ ಹಾಗೆ ಇಟ್ಟಿರುವುದು ಯಕ್ಷಪ್ರಶ್ನೆಯಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಶಾಸಕರು ಒಂದು ಸುಂದರವಾದ ಆಯುಷ್ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಸಿಬ್ಬಂದಿಗಳ ಕೊರತೆಯಿಂದ ಅಕ್ಕಪಕ್ಕದ ಹಳ್ಳಿಯ ಜನರು ಹಾಗೂ ಸ್ಥಳೀಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದಾಂಡೇಲಿಯ ಆಯುಷ್ ಆಸ್ಪತ್ರೆಯಲ್ಲಿ ನೇಮಕಾತಿಯಾಗದೆ ಹಾಗೆ ಇರುವ ಖಾಲಿ ಹುದ್ದೆಗಳ ನೇಮಕಾತಿಗಾಗಿ ಕೂಡಲೆ ಆದೇಶ ಮಾಡಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಜಿಲ್ಲಾಧ್ಯಕ್ಷರಾದ ರತ್ನಂ ಬಂಡಿ, ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ದಿವಾಕರ ಬಾಬು ಪೆರುಮಾಳ, ಅಂಬೇಡ್ಕರ್ ಅಭಿಮಾನಿ ಸೇನೆ ಭೀಮ ಧ್ವನಿ ಸಂಘದ ಅಧ್ಯಕ್ಷರಾದ ರವಿ ಮಾಳಕರಿ, ಸಮಾಜ ಸೇವಕರಾದ ಇಲಿಯಾಸ್ ಕಾಟಿ, ದೇವರಾಜ್ ದಾರ್ಲಾ, ಮಲ್ಲಿಕಾರ್ಜುನ್ ಯಲನಾಟಿ, ಮೇರಿ ಮುರಾರಿ, ಸುನಿತಾ.ಎಂ.ಯಲನಾಟಿ ಮೊದಲಾದವರು ಉಪಸ್ಥಿತರಿದ್ದರು.