ಭಟ್ಕಳ: ತಾಲೂಕಿನಾದ್ಯಂತ ಬುಧವಾರ ಗಣೇಶ ವಿಸರ್ಜನೆ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸ್ ಇಲಾಖೆ ಸೂಕ್ಷ್ಮ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿದೆ. ಕಾರವಾರದಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಅಂಕೋಲಾದಿಂದ ಭಟ್ಕಳದ ವರೆಗೆ ತಪಾಸಣೆ ನಡೆಸುತ್ತಿದೆ.
ಮುರ್ಡೇಶ್ವರ ರೈಲ್ವೆ ನಿಲ್ದಾಣ, ದೇವಸ್ಥಾನ, ಪ್ರಮುಖ ಸಾರ್ವಜನಿಕ ಗಣೇಶೋತ್ಸವದ ಸ್ಥಳಗಳು, ಜನನಿಬಿಡ ಪ್ರದೇಶ, ಪ್ರಮುಖ ಬೀದಿಗಳು, ಭಟ್ಕಳದ ಗ್ರಾಮ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನ, ಮುಖ್ಯ ರಸ್ತೆ, ರೈಲ್ವೆ ನಿಲ್ದಾಣಕ್ಕೆ ತೆರಳಿ ತಪಾಸಣೆ ನಡೆಸಿದೆ. ಪೊಲೀಸ್ ಇಲಾಖೆ ಉಭಯ ಕೋಮಿನ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಸಲಹೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ನಿಗಾ ಇಟ್ಟಿರುವ ತಂಡ ಅಶಾಂತಿಯನ್ನು ಹರಡುವ, ಕೋಮು ಭಾವನೆ ಕೆರಳಿಸುವ ಗ್ರೂಫ್ಗಳ ಮಾಹಿತಿ ಪಡೆದು ನಿರಂತರ ಸಂಪರ್ಕ ಸಾಧಿಸಿ ಅದರ ಚಟುವಟಿಕೆಗಳನ್ನು ಗಮನಿಸುತ್ತಿದೆ. ಜಿಲ್ಲೆಯ ವಿವಿಧ ಕಡೆ ಬಾಂಬ್ ಪತ್ತೆ ದಳ ದೇವಸ್ಥಾನಗಳಿಗೆ ತೆರಳಿ ತಪಾಸಣೆ ನಡೆಸಿದೆ.
ಅಧಿಕಾರಿಗಳಾದ ಅರಸಿ ಸಂಜಯ ಬೋವಿ, ಆನಂದ ನಾಯ್ಕ, ಶೇಖು ಪೂಜಾರಿ ಇವರು ಮಾರ್ವೆಲ್ ಎನ್ನುವ ಶ್ವಾನವನ್ನು ತಂದು ಸ್ಥಳೀಯ ಪೊಲೀಸರ ಸಹಾಯದಿಂದ ಎಲ್ಲಡೆ ತಪಾಸಣೆ ನಡೆಸಿದ್ದಾರೆ.