ಯಲ್ಲಾಪುರ: ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ಗ್ರಾಮೀಣ ಭಾಗದಲ್ಲಿ ಆರಂಭಗೊಂಡು, ಪಟ್ಟಣದಲ್ಲಿ ಶಾಖೆ ಹೊಂದಿ ಉತ್ತಮ ಬೆಳವಣಿಗೆ ಸಾಧಿಸುತ್ತ ಬಂದಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು.
ಅವರು ಪಟ್ಟಣದ ಎಪಿಎಂಸಿ ಶಾಖೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಡಕೆ ದಲಾಲಿ ಆರಂಭಿಸಿದ ಎರಡನೇ ಪ್ರಾಥಮಿಕ ಪತ್ತಿನ ಸಹಕಾರಿ ಇದಾಗಿದೆ. ಗುಣಮಟ್ಟದ ಸೇವೆ, ನಿಖರ ತೂಕ ಮತ್ತು ಆತ್ಮೀಯತೆಯ ಕಾರಣಕ್ಕೆ ಯಲ್ಲಾಪುರ ತಾಲೂಕಿನ 10 ಸಹಕಾರಿ ಸಂಘಗಳು, ಜೊಯಿಡಾ, ಶಿರಸಿ, ಅಂಕೋಲಾದ ಕೆಲ ಸಹಕಾರಿ ಸಂಘಗಳೂ ವಿಸ್ವಾಸದಿಂದ ಸಂಘದ ಮೂಲಕ ಅಡಕೆ ವಿಕ್ರಿ ನಡೆಸುತ್ತಿವೆ ಎಂದರು. 25 ಸಾವಿರದಿಂದ 1 ಲಕ್ಷ ರೂ ವರೆಗೆ ಸದಸ್ಯರ ಚಿಕಿತ್ಸೆಗೆ ಸಹಾಯ ನೀಡುವ ಸಹ್ಯಾದ್ರಿ ಕ್ಷೇಮನಿಧಿ ಈ ವರ್ಷ ಆರಂಭಿಸುತ್ತಿದ್ದೇವೆ. ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 41.44 ಲಕ್ಷ ರೂ ಲಾಭ ಗಳಿಸಿದೆ ಎಂದರು.
ಠೇವಣಿ ಸಂಗ್ರಹ, ಸಾಲ ವಿತರಣೆ, ಮರುಪಾವತಿ ಎಲ್ಲ ವಿಭಾಗದಲ್ಲಿಯೂ ಸಂಘ ಉತ್ತಮವಾಗಿ ಮುನ್ನಡೆಯುತ್ತಿದೆ. ಅಡಕೆ ವ್ಯವಹಾರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದ್ದೇವೆ ಎಂದು ವಿವರಿಸಿದರು.
ಸಂಘದ ಉಪಾಧ್ಯಕ್ಷ ರಾಘವೇಂದ್ರ ಕೋಣೆಮನೆ, ನಿರ್ದೇಶಕರಾದ ಶ್ರೀಕಾಂತ ಹೆಬ್ಬಾರ, ರಾಘವೇಂದ್ರ ಭಟ್ಟ, ಸೂರ್ಯನಾರಾಯಣ ಭಟ್ಟ, ರಾಮಕೃಷ್ಣ ಹೆಗಡೆ, ಶ್ರೀಪಾದ ಗಾಂವ್ಕರ, ಗಣಪತಿ ಗೌಡ, ಅರುಣ ನಾಯ್ಕ, ವಿನುತಾ ಗದ್ದೆ, ಮುಖ್ಯಕಾರ್ಯನಿರ್ವಾಹಕ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕ ಅನಂತ ಹೆಗಡೆ ಇದ್ದರು.