ಶಿರಸಿ: ನಗರದ ರಾಮನಬೈಲ್ ವಾರ್ಡಿನಲ್ಲಿ ಮಳೆಗಾಲದಲ್ಲಿಯೇ ಚರಂಡಿ ಗಟಾರ ನಿರ್ಮಾಣ ಹಾಗೂ ಸಿಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದು ಸಂಪೂರ್ಣ ಕಳಪೆಯಾಗಿದೆ ಹಾಗೂ ಮಳೆಯ ಮದ್ಯದಲ್ಲಿಯೇ ಕಾಮಗಾರಿ ನಡೆಸುತ್ತಿರುವುದರಿಂದ ಕಾಂಕ್ರಿಟ್ ಮಳೆನೀರಿಗೆ ಕಿತ್ತುಕೊಂಡು ಹೋಗಿದೆ ಎಂದು ರಾಷ್ಟ್ರೀಯ ದಲಿತ ಸಮಿತಿ ಅಧ್ಯಕ್ಷ ಕೃಷ್ಣ ಎಚ್. ಬಳಿಗಾರ ಆರೋಪಿಸಿದ್ದಾರೆ.
ರಾಮನಬೈಲ್ 30ನೇ ವಾರ್ಡಿನಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಪರಿಶೀಲಿಸಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಸರಕಾರದ ಹಣ ದುರುಪಯೋಗವಾಗುತ್ತಿದ್ದು, ಶಿರಸಿ ನಗರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮನಬಂದಂತೆ ವರ್ತಿಸುತ್ತಿದ್ದಾರೆ. ಈ ಕೂಡಲೆ ಈ ಕಳಪೆ ಕಾಮಗಾರಿ ಹಾಗೂ ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಬೇಕು ಹಾಗೂ ಅವ್ಯವಹಾರದ ತನಿಖೆ ನಡೆಯಬೇಕು ಕಾಮಗಾರಿಯ ಬಿಲ್ ಪಾವತಿ ಮಾಡದಂತೆ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.
ಸರಕಾರದ ಹಣ ದುರುಪಯೋಗಪಡಿಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಮೇಲೆ ಕ್ರಮ ಕೈಗೊಳ್ಳಬೇಕು.ಈ ಬಗ್ಗೆ ಜಿಲ್ಲಾಧಿಕಾರಿಗಳು, ಕಾರವಾರ ಹಾಗೂ ಸಹಾಯಕ ಕಮೀಶನರ್, ಶಿರಸಿ ಉಪ ವಿಭಾಗ, ಶಿರಸಿರವರಿಗೆ ಪತ್ರ ಬರೆದು ಸೂಕ್ತ ತನಿಖೆ ಬಗ್ಗೆ ಸಹ ಒತ್ತಾಯಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.