ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿಗೆ ಜುಲೈ ತಿಂಗಳಿಗೆ ಭಾಜನರಾದ ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರು ಪ್ರಸನ್ನ ಟಿ.ಸಿ ಅವರಿಗೆ ಶುಕ್ರವಾರ ಕಾರವಾರದ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಜನರಿಗೆ ತಲುಪಿಸುವಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯಡಿ ಸ್ಥಾಪಿತವಾದ ಗ್ರಾಮ ಪಂಚಾಯತ್ಗಳ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿಗಳನ್ನು ನಿಗದಿತ ಮಾನದಂಡಗಳನ್ನು ಆಧರಿಸಿ ಪ್ರತಿ ತಿಂಗಳು ಪಿಡಿಓ ಆಫ್ ದಿ ಮಂತ್ ಪ್ರಶಸ್ತಿ ನೀಡುತ್ತಿದ್ದೇವೆ. ಇದರಿಂದ ಗ್ರಾಮೀಣ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಮತ್ತು ಆ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಪಡೆದುಕೊಳ್ಳಲು ಅವಕಾಶ ಸೃಷ್ಟಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ ಹೇಳಿದರು.
ಪ್ರಶಸ್ತಿ ಪಡೆದು ಮಾತನಾಡಿದ ಗುರು ಪ್ರಸನ್ನ ಟಿ.ಸಿ. ಸಿಇಓ ಅವರಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿರುವುದು ಸಂತಸ ಹೆಚ್ಚಿಸಿದೆ. ಭವಿಷ್ಯದಲ್ಲೂ ಉತ್ತಮ ರೀತಿಯಲ್ಲಿ ಜನರಿಗೆ ಸೇವೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇಲ್ಲಿಯವರೆಗೆ ಉತ್ತಮ ಮಾರ್ಗದರ್ಶನ ನೀಡಿ, ಸಹಕರಿಸಿದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಯೋಜನಾ ನಿರ್ದೇಶಕ ಕರೀಂ ಆಸಾದಿ, ಅಭಿವೃದ್ಧಿ ಶಾಖೆ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಮತ್ತಿತರರು ಉಪಸ್ಥಿತರಿದ್ದರು.
ಬೆಸ್ಟ್ ಪಿಡಿಓ ಆಫ್ ದಿ ಮಂತ್ ಪ್ರಶಸ್ತಿ ಪಡೆದ ಗುರುಪ್ರಸನ್ನ ಟಿ.ಸಿ.
