ಅರ್ಜಿದಾರರ ಹಣಕ್ಕೆ ಬೆಲೆಯಿಲ್ಲವೇ.!!?: ಅನಂತ ಹೆಗ್ಗಾರ್ ವಿಷಾದ
ಹೊನ್ನಾವರ : ಇತ್ತೀಚಿನ ವರ್ಷಗಳಲ್ಲಿ ಭೂ ಮಾಪನ ಮತ್ತು ಭೂ ದಾಖಲೆಗಳ ಕಚೇರಿಗೆ ಜನ ಸಾಮಾನ್ಯರು ತಮ್ಮ ಭೂಮಿಯ ಪಹಣಿ ಪತ್ರಿಕೆ ಪೋಡಿಗಾಗಿ ಇಲ್ಲವೇ 11ಇ ನಕ್ಷೆಗಾಗಿ ಹಣ ಭರಣ ಮಾಡಿ ಅರ್ಜಿ ಸಲ್ಲಿಸಿರುವಾಗ, ಸರ್ವೆ ಇಲಾಖೆ ನಕ್ಷೆ ಇಲ್ಲವೆಂದು ಅರ್ಜಿದಾರರ ಅರ್ಜಿಯನ್ನು ಕಾಲಮಿತಿಗೆ ಒಳಪಡಿಸಿ ವಿಲೆಗೆ ತರುವುದು ಅತ್ಯಂತ ಖಂಡನೀಯ. ಅರ್ಜಿದಾರರು ಇಲಾಖೆಗೆ ಕಟ್ಟಿದ ಹಣಕ್ಕೆ ಬೆಲೆಯಿಲ್ಲವೇ? ಎಂದು ಉತ್ತರಕನ್ನಡ ಜಿಲ್ಲಾ ದಿ. ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ವಿಷಾದ ವ್ಯಕ್ತ ಪಡಿಸಿರುತ್ತಾರೆ.
ಭೂದಾಖಲೆಗಳ ಕಚೇರಿಯಲ್ಲಿ ಪಹಣಿ ಪತ್ರಿಕೆಗೆ ಸಂಬಂಧಪಟ್ಟ ಕೆ.ಡಿ.ಟಿ ಮತ್ತು ನಕ್ಷೆ ಇರಬೇಕು. ಆ ನಕ್ಷೆ ಮತ್ತು ಕೆ.ಡಿ.ಟಿಗೆ ಅನುಗುಣವಾಗಿ ಪಹಣಿ ಪತ್ರಿಕೆ ಇರಬೇಕೆಂಬುವುದು ಕಂದಾಯ ಇಲಾಖೆಯ ನಿಯಮಾವಳಿ. ಜನಸಾಮಾನ್ಯರು ತಮ್ಮ ಪಹಣಿ ಪತ್ರಿಕೆ ಮತು ಕೆ.ಡಿ.ಟಿ ಇಟ್ಟು 11ಇ ನಕ್ಷೆ ಇಲ್ಲವೇ ಪೋಡಿಗಾಗಿ ಅರ್ಜಿ ಸಲ್ಲಿಸುವಾಗ ಕ್ಷೇತ್ರಕ್ಕೆ ಅನುಗುಣವಾಗಿ ಪ್ರತಿಯೊಂದು ಪಹಣಿಗೆ ಕನಿಷ್ಟ 1500 ರೂ. ಇಂದ ಹಿಡಿದು ಹೆಚ್ಚುವರಿ ಹಣವನ್ನು ಸಹ ಇಲಾಖೆ ಭರಣ ಮಾಡಿಸಿಕೊಳ್ಳುತ್ತದೆ. ಸರ್ವೆ ಕಾರ್ಯವನ್ನು ಕಾಲಮಿತಿಗೆ ಒಳಪಡಿಸಿ, ಕಾಲ ಮಿತಿ ಮೀರಿದ ನಂತರ ನಕ್ಷೆ ಇಲ್ಲವೆಂದು ಅರ್ಜಿದಾರರ ಅರ್ಜಿಯನ್ನು ವಿಲೆಗೆ ತರುವುದು ಯಾವ ನ್ಯಾಯ. ಜನಸಾಮಾನ್ಯರು ಕಟ್ಟಿದ ಹಣಕ್ಕೆ ಬೆಲೆ ಇಲ್ಲವೇ? ನಕ್ಷೆ ಸರ್ವೆ ಇಲಾಖೆಯಲ್ಲಿ ದೊರಕಬೇಕೆ ಹೊರತು ಅನ್ಯ ಇಲಾಖೆಯಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ ದೊರಕುವ ವಸ್ತುವಲ್ಲ. ಆದ್ದರಿಂದ ಇಲಾಖೆ ಅರ್ಜಿದಾರ ಅರ್ಜಿಯನ್ನು ಕಾಲಮಿತಿಗೆ ಒಳಪಡಿಸಿ ವಿಲೆಗೆ ತರುವುದನ್ನು ಬಿಟ್ಟು, ಸದ್ರಿ ಅರ್ಜಿಯನ್ನು ಊರ್ಜಿತ ಇಟ್ಟು ಅರ್ಜಿದಾರರ ಬೇಡಿಕೆಯನ್ನು ಪೂರ್ಣಗೊಳಿಸಬೇಕು. ಅರ್ಜಿದಾರರಿಂದ ನಕ್ಷೆ ನಿರ್ಮಾಣಕ್ಕಾಗಿ ಪ್ರತ್ಯೇಕ ಅರ್ಜಿ ಪಡೆದು ಜನಸಾಮಾನ್ಯರ ಕಾಲ-ಧನ, ಮತ್ತು ಮಾನಸಿಕ ಹರಣ ಮಾಡುವುದು ಸರಿಯಲ್ಲ. ನಕ್ಷೆಗಳನ್ನು ರಕ್ಷಿಸುವುದು, ಪತ್ತೆಹಚ್ಚುವುದು ಇಲ್ಲವೇ ನಿರ್ಮಾಣ ಮಾಡುವುದು ಇಲಾಖೆಯ ಜವಾಬ್ದಾರಿಯೇ ಹೊರತು ಜನಸಾಮಾನ್ಯರ ಕೆಲಸವಲ್ಲ ಎಂಬುವುದನ್ನು ಸರ್ಕಾರ ಯಾ ಇಲಾಖೆ ಮನಗಾಣಬೇಕು.
ಆದಕಾರಣ ದಕ್ಷ ಪ್ರಾಮಾಣಿಕ ಸಚಿವರು ಹಾಗೂ ಆಯುಕ್ತರು ತಮ್ಮ ಅಧಿಕಾರ ಶಕ್ತಿಯನ್ನು ಉಪಯೋಗಿಸಿ ಇಲಾಖೆಯ ಇಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಜನತೆಯ ಮನೆ-ಮನಗಳಲ್ಲಿ ಚಿರಸ್ಥಾಯಿ ಆಗಬೇಕು. ಇಲಾಖೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಇಲಾಖೆಯಿಂದಲೇ ಪೂರೈಕೆಯಾಗಬೇಕು. ಅರ್ಜಿದಾರರು ಪೋಡಿ ಇಲ್ಲವೇ ೧೧ಇ ನಕ್ಷೆಗಾಗಿ ಅರ್ಜಿಸಲ್ಲಿಸಿದಾಗ ನಕ್ಷೆ ಇಲ್ಲದ ಪಕ್ಷದಲ್ಲಿ ಇಲಾಖೆ ಕಾಲಾವಕಾಶ ತೆಗೆದುಕೊಂಡು ಅರ್ಜಿದಾರರ ಅರ್ಜಿಯನ್ನು ಊರ್ಜಿತ ಇಟ್ಟು ನಕ್ಷೆ ನಿರ್ಮಾಣ ಮಾಡಿ ಇಲ್ಲವೇ ನಕ್ಷೆ ಪತ್ತೆ ಹಚ್ಚಿ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ದಿ. ಡಿ. ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಸಾರ್ವಜನಿಕವಾಗಿ ಆಗ್ರಹಿಸುತ್ತದೆ. ಈ ಕುರಿತು ಮಾನ್ಯ ಕಂದಾಯ ಸಚಿವ ಕೃಷ್ಣ ಬೈರೆಗೌಡರಿಗೆ ಮತ್ತು ಸರ್ವೆ ಇಲಾಖೆ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆಯೆಂದು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಪತ್ರಿಕೆ ತಿಳಿಸಿದ್ದಾರೆ.