ಯಲ್ಲಾಪುರ: ಕನ್ನಡ ಭಾಷೆ,ನೆಲದ ಬಗ್ಗೆ ಕನ್ನಡಿಗರು ಕಳಕಳಿ ತೋರದೇ ಇದ್ದಲ್ಲಿ ಮತ್ಯಾರೂ ಕಳಕಳಿ ತೋರಲು ಸಾಧ್ಯವಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಶನಿವಾರ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಇವರ ಆಶ್ರಯದಲ್ಲಿ ೨೦೨೩-೨೪ ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ.೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳಿಗಳನ್ನು ಗೌರವಿಸಿ ಮಾತನಾಡುತ್ತಿದ್ದರು.
ಇಂಗ್ಲಿಷ್ ಜಾಗತಿಕ ಭಾಷೆ. ಅದು ಬದುಕಿನ ಭಾಷೆ. ಆದರೆ ಕನ್ನಡ ನಮ್ಮ ತಾಯ್ನೆಲದ ಭಾಷೆ. ಕನ್ನಡದ ಪರಿಮಳವನ್ನು ಇಟ್ಟುಕೊಂಡೇ ಕನ್ನಡತನ ಪೋಷಿಸಬೇಕು. ಓದಿನ ಜೊತೆಗೆ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ಒಂದು ಸಂಸ್ಕೃತಿ. ಭಾಷೆಯ ಮೂಲಕ ಸಮಾಜ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಯ ಬೇಕೆನ್ನುವ ಉದ್ದೇಶದಿಂದ ಕನ್ನಡ ಭಾಷಯಲ್ಲಿ ನೂರಕ್ಕೆನೂರು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದರು.
ಕಸಾಪ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಪ್ರಸ್ತಾಪಿಸಿದರು. ಬಿಇಒ ಎನ್.ಆರ್. ಹೆಗಡೆ, ನಾಟಕಕಾರ ಟಿ ವಿ ಕೋಮಾರ,ಕಸಾಪ ಜಿಲ್ಲಾ ಪ್ರಮುಖ ಮುರ್ತುಜಾ ಹುಸೇನ ಪ್ರೌಢಶಾಲಾ ಸಹಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಜಯ ನಾಯಕ,ಕಸಾಪ ಕಾರ್ಯದರ್ಶಿಗಳಾದ ಗಣಪತಿ ಭಟ್ ಹಾಗೂ ಸಂಜೀವಕುಮಾರ ಹೊಸ್ಕೇರಿ, ಪ್ರತಿದ್ವನಿ ಬಳಗದ ನಾಗೇಶಕುಮಾರ ಭಾಗವಹಿಸಿದ್ದರು.