ಹೊನ್ನಾವರ: ತಾಲೂಕು ಕಾನೂನು ಸೇವಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ, ಪ್ರಭಾತನಗರದಲ್ಲಿ “ಬಾಲ ಕಾರ್ಮಿಕ ವಿರೋಧಿ ದಿನಾಚರಣೆ” ಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಬಿ.ಸಿ. ಚಾಲನೆ ನೀಡಿದರು.
ನಂತರ ಮಾತನಾಡಿ, ಶಾಲಾ ಶಿಕ್ಷಣದ ಮಹತ್ವ ಬಾಲ ಕಾರ್ಮಿಕತ್ವದ ಭಯಾನಕ ಮಜಲುಗಳನ್ನು ತೆರೆದಿಟ್ಟು ಅದರ ನಿರ್ಮೂಲನೆಗೆ ನಾವೆಲ್ಲರು ಕಂಕಣಬದ್ಧರಾಗಬೇಕು. ಅವರನ್ನೂ ಶಿಕ್ಷಣದ ಮುಖ್ಯವಾಹಿನಿಗೆ ತಂದು ಶಿಕ್ಷಣ, ಆರೋಗ್ಯ, ವಿಶ್ರಾಂತಿ ಮತ್ತು ಮೂಲಭೂತ ಸ್ವಾತಂತ್ರ್ಯ ಪಡೆಯುವಂತಾಗಬೇಕು. ನಿಮ್ಮ ಸುತ್ತ ಮುತ್ತ ಇಂತಹ ಪ್ರಕರಣಗಳು ಕಂಡುಬಂದರೆ ಶಿಕ್ಷಕರಿಗೆ ತಿಳಿಸಲು ಹಿಂಜರಿಯಬಾರದು’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸಾವಿತ್ರಿ ಗೌಡ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ “ಬಾಲ ಕಾರ್ಮಿಕ ವಿರೋಧಿ ದಿನ”ದ ಪ್ರತಿಜ್ಞಾ ವಿಧಿ ಬೋಧಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ಸಂಪದಾ ಗುನಗಾ ಮಾತನ್ನಾಡಿ ‘ಮಕ್ಕಳು ಬಾಲ ಕಾರ್ಮಿಕರಾಗದಂತೆ ಜಾಗರೂಕತೆಯ ಹೆಜ್ಜೆಗಳನ್ನಿಡುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಅರುಣಕುಮಾರ ಶೆಟ್ಟಿ ಮಾತನಾಡಿ ‘ಹಿಂದಿನ ಕಾಲದಲ್ಲಿ ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಎಂದು ಸಂವಿಧಾನದ ಅಭಯ ದೊರಕುವ ಮೊದಲು ಹೋಟೆಲ್ ಕೆಲಸಕ್ಕಾಗಿ ಹೋಗಿದ್ದ ಅನೇಕ ಬಾಲ ಕಾರ್ಮಿಕರು ಹೋಟೆಲ್‌ಗಳನ್ನೇ ಕಟ್ಟಿ ಉದ್ದಿಮೆದಾರರಾದುದು. ಈಗ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009 ಜಾರಿಗೆ ಬಂದು 6-14 ವಯಸ್ಸಿನ ಮಕ್ಕಳೆಲ್ಲರೂ ಸರಿಯಾದ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವ ಸ್ಥಾನ ಪಡೆದುಕೊಂಡು ಯಾವ ಎತ್ತರಕ್ಕೂ ಬೆಳೆಯಲು ಸಾಧ್ಯವಾಗಿದೆ. ಅಂತಹ ಗೌರವದ ಬದುಕನ್ನು ಕಟ್ಟಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು
ಇನ್ನೋರ್ವ ಸಹಾಯಕ ಸರ್ಕಾರಿ ಅಭಿಯೋಜಕರಾದ ಪೂರ್ಣಿಮಾ ನಾಯ್ಕ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ವಿ ಭಟ್, ಕಾರ್ಯದರ್ಶಿ ಮನೋಜ ಜಾಲಿಸತ್ಗಿ, ಹೊನ್ನಾವರ ಕಾರ್ಮಿಕ ಇಲಾಖೆಯ ಡಾಟಾ ಎಂಟ್ರಿ ಆಪರೇಟರ್ ಆನಂದ ಮತ್ತು ಕು.ಪುಷ್ಪಾ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಚಂದಾವರ, ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ದೇವರಾಜ ಹೆಗಡೆಕಟ್ಟೆ ಸ್ವಾಗತಿಸಿ, ಸೀಮಾ ನಾಯ್ಕ ವಂದಿಸಿ, ಮಂಜುನಾಥ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.