ಶಿವಮೊಗ್ಗ: ಹೊಸೂಡಿ ಶಿವಮೊಗ್ಗ ತಾಲೂಕು ಕೇಂದ್ರದಿಂದ ಕೇವಲ 10 ಕಿ.ಮೀ.ದೂರದಲ್ಲಿರುವ ಒಂದು ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರಸ್ವಾಮಿ. ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದೆ. ಆರಂಭದಿಂದಲೂ ಇಲ್ಲಿ ಕಾಲ ಕಾಲಕ್ಕೆ ಆಯಾ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯುತ್ತಿದ್ದು ಇದೊಂದು ಶ್ರದ್ಧಾ ಭಕ್ತಿಯ ಹಾಗೂ ಬಂದ ಭಕ್ತರಿಗೆ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಆಧ್ಯಾತ್ಮಿಕ ಕೇಂದ್ರವೂ ಆಗಿದೆ. ಇಂದು ಏಪ್ರಿಲ್ 30ರಂದು ಇದೇ ಶ್ರೀ ವೀರಭದ್ರಸ್ವಾಮಿಯ ಕೆಂಡಾರ್ಚನಾ ಮಹೋತ್ಸವ ಜರುಗಲಿದೆ.
ಕೌಟುಂಬಿಕ ಸಮಸ್ಯೆ, ಮಕ್ಕಳಲ್ಲಿ ಬುದ್ಧಿಮಾಂದ್ಯತೆ ಇದ್ದರೆ, ಕೃಷಿ ಭೂಮಿಯಲ್ಲಿ ಏನಾದರೂ ತೊಂದರೆ ತೊಡಕುಗಳುಂಟಾದರೆ, ಮದುವೆ ವಯಸ್ಸು ಬಂದರೂ ಕಂಕಣ ಬಲ ಬಾರದಿದ್ದರೆ, ಕುಡಿಯುವ ನೀರಿನ ಬಾವಿ ತೋಡಿಸುವುದ್ದಿದ್ದರೆ, ಎಲ್ಲಾದರೂ ಬೋರ್‌ವೆಲ್ ಪಾಯಿಂಟ್ ಹಾಕಿಸುವುದಿದ್ದರೆ, ಮಕ್ಕಳಿಗೆ ಅನಾರೋಗ್ಯ, ನೌಕರಿ ವಿಳಂಬತೆ ಕಾಡುತ್ತಿದ್ದರೆ ಹೀಗೆ ಕುಟುಂಬದ ಹತ್ತು ಹಲವಾರು ಸಮಸ್ಯೆಗಳಿಗೆ ವಿಶೇಷವಾಗಿ ‘ಗುರುತಪ್ಪಣೆ’ ‘ಖಟ್ಲೆ-ಕರಾರು’ಗಳ ಮೂಲಕ ಪರಿಹಾರ ಪಡೆದುಕೊಳ್ಳುವ ಶಕ್ತಿ ಕೇಂದ್ರ ಇದಾಗಿದೆ
ಮೊದಲು ಈ ದೇವಸ್ಥಾನ ಹಳೆ ಕೈ ಹಂಚಿನ ಮೇಲ್ಚಾವಣಿ ಹೊಂದಿದ್ದು ಗರ್ಭ ಗುಡಿಯಲ್ಲಿ ಒಂದು ಭಿನ್ನವಾದ ಶ್ರೀ ವೀರಭದ್ರನ ಶಿಲಾ ವಿಗ್ರಹವಿತ್ತು. ಈಗ ಸದ್ಭಕ್ತರ, ದಾನಿಗಳ ಸಹಕಾರದಿಂದ ಕಣ್ಮನ ಸೆಳೆಯುವ ಕರ್ನಾಟಕದ್ದೇ ಆದ ಅಪರೂಪದ ವೇಸರ ಶೈಲಿಯ ಶಿಖರವನ್ನು ಹೊಂದಿದ ಶಿಲಾಮಯ ದೇವಾಲಯ ತಲೆ ಎತ್ತಿ ನಿಂತಿದೆ. ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅತೀವ ಆಸಕ್ತಿ-ಶ್ರದ್ಧೆ ಹೊಂದಿದ್ದ ಹೊಸೂಡಿ ವೆಂಕಟಶಾಸ್ತ್ರಿಗಳು ಭಿನ್ನವಾದ ಮೂರ್ತಿಯನ್ನು ಬದಲಾಯಿಸಿ ಅಲ್ಲಿ ನೂತನ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದರು. ಆ ಪ್ರಕಾರ ಅಂದಿನ ಪ್ರಸಿದ್ಧ ಶಿಲ್ಪಕಾರರಾಗಿದ್ದ ಕಾರ್ಕಳ ಗೋಪಾಲಕೃಷ್ಣ ಶೆಣೈ ಅವರಿಂದ ಹೊಸ ಮೂರ್ತಿ ಕೆತ್ತಿಸಿ ಸ್ಥಳೀಯರ ಹಾಗೂ ಸುತ್ತಮುತ್ತಲಿನ ಸದ್ಭಕ್ತರ ಸಹಕಾರದೊಂದಿಗೆ ಆ ಮೂರ್ತಿ ಪ್ರತಿಷ್ಠಾಪಿಸಲಾಗಿದೆ
ದೇವಸ್ಥಾನದಲ್ಲಿ ಹಾಲಿ ಇರುವ ಮೂರ್ತಿ ಅದೇ ಆಗಿದ್ದು ಕಪ್ಪು ಶಿಲೆಯಿಂದ ಮಾಡಿದ ಮೂರ್ತಿ ಅತ್ಯಂತ ಮನಮೋಹಕವಾಗಿದೆ. ಸಾಗರದ ವರದಹಳ್ಳಿಯ ಭಗವಾನ್ ಶ್ರೀ ಶ್ರೀಧರಸ್ವಾಮಿಗಳು ಹಿಂದಿನ ಅಷ್ಟಗ್ರಹಯೋಗದ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ಆಧ್ಯಾತ್ಮದ ಸಿಂಚನ ನೀಡಿದ್ದಾರೆ. ಶ್ರೀ ಸ್ವಾಮಿಯ ಉಗ್ರತೆಯನ್ನು ಹೋಗಲಾಡಿಸಿ ಸೌಮ್ಯ ರೂಪವನ್ನು ನೀಡಿದ್ದಾರೆ ಎಂಬುದು ಸ್ಥಳೀಯರ ಮಾಹಿತಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಭಕ್ತರಷ್ಟೇ ಅಲ್ಲದೆ ನೆರೆಯ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ದೂರದ ಬೆಂಗಳೂರು ಜಿಲ್ಲೆಯ ಹಲವರು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ. ಪ್ರತಿ ವರ್ಷ ಮಾರ್ಚದಲ್ಲಿ ಶ್ರೀ ದೇವರಿಗೆ ಶತ ರುದ್ರಾಭಿಶೇಕ, ಚೈತ್ರ ಬಹುಳ ಎರಡನೆ ಮಂಗಳವಾರ ಕೆಂಡಾರ್ಚನೆ, ದಸರಾ ವಿಜಯೋತ್ಸವ, ಪಲ್ಲಕ್ಕಿ ಉತ್ಸವ ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಅನೂಚಾನವಾಗಿ ನಡೆದುಕೊಂಡುಬರುತ್ತಿದೆ. ಯಾವುದೇ ಜಾತಿ, ಧರ್ಮ, ಮತ,ಪಂಥಗಳ ಬೇಧ-ಭಾವವಿಲ್ಲದೆ ಎಲ್ಲ ಸಮುದಾಯದವರೂ ಈ ದೇವರಿಗೆ ನಡೆದುಕೊಳ್ಳುತ್ತಾರೆ. ಹೊತ್ತ ಹರಕೆ ತೀರಿಸುತ್ತಾರೆ.
ಈ ದೇವಸ್ಥಾನದ ವಿಶೇಷತೆಯೆಂದರೆ ‘ಗುರುತಪ್ಪಣೆ’ ಕೊಡಿಸುವುದು. ಅಂದರೆ ಸಮಸ್ಯೆ ಇದ್ದವರು ದೇವಸ್ಥಾನಕ್ಕೆ ಬರಬೇಕು. ವಿಷಯದ ಬೇಕು-ಬೇಡಗಳ ಕುರಿತು ಒಂದು ಚೀಟಿಯಲ್ಲಿ ಬರೆದು ಯಾರಿಗೂ ಗೊತ್ತಾಗದ ಹಾಗೆ ಅವನ್ನು ಬೇರೆ ಬೇರೆ ಜಾಗದಲ್ಲಿ ಇಡುತ್ತಾರೆ. ಕೆಲವೊಂದು ಧಾರ್ಮಿಕ ಪ್ರಕ್ರಿಯೆ ನಡೆದ ನಂತರ ಪಲ್ಲಕ್ಕಿಯಿಂದ ಅಪ್ಪಣೆ ಕೊಡಿಸುತ್ತಾರೆ. ಪಲ್ಲಕ್ಕಿ ಹೊರುವವರಿಗೆ ಚೀಟಿ ಯಾವ ಜಾಗದಲ್ಲಿದೆ ಎಂದು ತಿಳಿದಿರುವುದಿಲ್ಲ. ಆದರೆ ಪಲ್ಲಕ್ಕಿ ತನ್ನನ್ನು ಹೊತ್ತವರೊಂದಿಗೆ ಚೀಟಿ ಇದ್ದಲ್ಲಿಗೇ ಹೋಗಿ ತೋರಿಸುತ್ತದೆ. ಆ ಚೀಟಿಯಲ್ಲಿ ಏನು ಬರೆದಿರುತ್ತೋ ಅದೇ ಸಮಸ್ಯೆಗೆ ಉತ್ತರವಾಗುತ್ತದೆ. ಯಂತ್ರ-ಮಂತ್ರ ಕಟ್ಟಿಸುವ ಪರಿಪಾಠವೂ ಇಲ್ಲಿದೆ. ಹಿರಿಯರಾದ ದಿ.ಶಂಕರನಾರಾಯಣ ಭಟ್ಟರು ಇದನ್ನು ನಡೆಸಿಕೊಡ್ಡುತ್ತಿದ್ದರು. ಈಗ ಅವರ ಮಕ್ಕಳು, ಸಮಿತಿಯ ಸದಸ್ಯರೇ ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದೆಲ್ಲ ನಂಬಿಕೆ ಮೇಲೆ ಅವಲಂಬಿತವಾಗಿದೆ ಎಂಬುದು ಅಲ್ಲಿಗೆ ಬಂದು ಪರಿಹಾರ ಕಂಡುಕೊಂಡ ಹಲವರ ಅಭಿಪ್ರಾಯ. ಶ್ರೀ ಸ್ವಾಮಿಯ ಅಪ್ಪಣೆ ಮೇರೆಗೆ ಹಾಗೂ ಭಕ್ತರ ಸಹಕಾರದೊಂದಿಗೆ ದೇವಾಲಯದ ಎದುರಿನಲ್ಲಿ ಆಕರ್ಷಕ ಶಿಲಾಮಯ ಗರುಡಗಂಬವನ್ನು ನಿಲ್ಲಿಸಲಾಗಿದೆ. ಇದಕ್ಕೆ ತಾಗಿ ಪುರಾತನ ನಂದಿ ಶಿಲ್ಪವನ್ನು ಇಡಲಾಗಿದೆ. ಈಗ ನೂತನವಾಗಿ ಭವ್ಯವಾದ ಶ್ರೀ ಚೌಡೇಶ್ವರಿ ಅಮ್ಮನವರ ಶಿಲಾಮಯ ದೇವಾಲಯ ನಿರ್ಮಾಣವಾಗಿದ್ದಲ್ಲದೆ ನಾಗದೇವತೆಯ ಪ್ರತಿಷ್ಟೆಯೂ ಆಗಿದೆ. ಇವೆಲ್ಲದರ ಜತೆಗೆ ಶ್ರೀ ಭೂಮಾವತಿ ಅಮ್ಮನವರ ಜೀರ್ಣೋದ್ಧಾರ ಮತ್ತು ಮುಖ ಮಂಟಪವನ್ನು ನಿರ್ಮಿಸಲು ದೇವಸ್ಥಾನದ ಸಮಿತಿ ತೀರ್ಮಾನಿಸಿದೆ. ದಾನಿಗಳು ಹೊಸೂಡಿ ಕೆನರಾ ಬ್ಯಾಂಕ್ ಶಾಖೆಯ ಎಸ್.ಬಿ.ಖಾತೆ ಸಂಖ್ಯೆ 3795101000001ರ ಮೂಲಕವೂ ಉದಾರ ದೇಣಿಗೆ ನೀಡಬಹುದಾಗಿದೆ ಎಂದು ದೇವಸ್ಥಾನದ ಸೇವಾ ಸಮಿತಿ ವಿನಂತಿಸುತ್ತಿದೆ
ಈ ದೇವಸ್ಥಾನದ ಪೂಜೆ ಕೈಂಕರ್ಯಗಳಿಗಾಗಿ ಹೊಸೂಡಿ ವೆಂಕಟಶಾಸ್ತ್ರಿಗಳು ದೇವಸ್ಥಾನಕ್ಕೆಂದೇ ಸುಮಾರು 04 ಎಕರೆ ಮುಕ್ಕಾಲು ಗುಂಟೆ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಪೂಜೆ ಮಾಡುವ ಅರ್ಚಕರು ಆ ಜಮೀನಿನ ವಹಿವಾಟು ಮಾಡಿ ಅದರಿಂದ ಬಂದ ಆದಾಯದಲ್ಲಿ ದೇವಸ್ಥಾನದ ಖರ್ಚು-ವೆಚ್ಚ ಭರಿಸಬೇಕು ಎಂಬ ನಿಯಮವಿದೆಯಂತೆ. ಅಲ್ಲದೆ ಈಗಿರುವ ದೇವಸ್ಥಾನಕ್ಕೆ ಹೊಂದಿದಂತೆ ಎರಡು ಎಕರೆ ಒಂದು ಗುಂಟೆ ಜಾಗವನ್ನು ವೆಂಕಟಶಾಸ್ತಿçಯವರ ಪುತ್ರ ದತ್ತಾತ್ರೇಯ ಶಾಸ್ತ್ರಿ ಎಂಬುವವರು ‘ದಾನ ಪತ್ರ’ದ ಮೂಲಕ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದಾರೆ. ದೇವಸ್ಥಾನದ ನಂದಾದೀಪ ಸದಾ ಕಾಲ ಬೆಳಗುತ್ತಿರಬೇಕು ಎಂಬುದು ಅವರ ಆಶಯವಾಗಿತ್ತಂತೆ. ಹೊಸೂಡಿ ಪಂಚಾಯತಿ ಇರುವ ಭೂಮಿಯೂ ವೆಂಕಟಶಾಸ್ತ್ರಿಯವರ ಮನೆತನದವರು ದೇವಸ್ಥಾನಕ್ಕೆ ಬಿಟ್ಟುಕೊಟ್ಟಜಾಗವೇ ಆಗಿದೆ.
ಹೊಸೂಡಿ ಈ ಮೊದಲು ಪ್ರಸಿದ್ಧ ಜೈನ ಕೇಂದ್ರವಾಗಿತ್ತು. ಈ ಗ್ರಾಮದಲ್ಲಿ ಕಂಡು ಬರುವ ಜೈನರ ಶಾಸನೋಕ್ತ ವೀರಗಲ್ಲುಗಳು, ನಿಷಧಿಗಲ್ಲುಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಆದರೆ ಕಾಲಾನಂತರದಲ್ಲಿ ಶೈವ ಧರ್ಮ ಪ್ರವರ್ಧಮಾನಕ್ಕೆ ಬಂದಂತಿದೆ. ದೇವಸ್ಥಾನದ ಸೇವಾ ಸಮಿತಿಯು ಎಲ್ಲರ ಸಹಕಾರದೊಂದಿಗೆ ಉಸ್ತುವಾರಿ ನೊಗವನ್ನು ಹೊತ್ತು ಕೆಲಸ ಮಾಡುತ್ತಿದೆ. ಉತ್ಸವದ ದಿನ ಮಧ್ಯಾಹ್ನ ಬಂದ ಭಕ್ತಾದಿಗಳಿಗೆ ಮಧ್ಯಾಹ್ನದ ಪ್ರಸಾದ ವಿನಿಯೋಗವೂ ಇರುತ್ತದೆ. ಶಿವಮೊಗ್ಗದಿಂದ ಹೊಸೂಡಿಗೆ ನಿತ್ಯ ಬೆಳಿಗ್ಗೆ 7-15ರಿಂದ ರಾತ್ರಿ 9ರವರೆಗೆ ನಿರಂತರ ಸರಕಾರಿ ಬಸ್ಸಿನ ಸಂಚಾರವಿದೆ. ಖಾಸಗಿ ಆಟೊ ರಿಕ್ಷಾ ಸೌಲಭ್ಯಗಳೂ ಇವೆ. ಒಟ್ಟಿನಲ್ಲಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನವು ಆಸ್ತಿಕರಿಗೆ ತುಂಬಾ ಕಾರ್ಣಿಕ ಶಕ್ತಿ ಹೊಂದಿರುವ ಸ್ಥಳವೂ ಹಾಗೂ ಇಷ್ಟಾರ್ಥ ಸಿದ್ಧಿಸುವ ಸ್ಥಳವೂ ಆಗಿದೆ ಎಂಬುದು ಹಲವು ಭಕ್ತರ ಅಭಿಪ್ರಾಯವಾಗಿದೆ.