Slide
Slide
Slide
previous arrow
next arrow

ಕಾಂಗ್ರೆಸ್ ಗ್ಯಾರಂಟಿಗಳಿಂದ ಬಡವರ ಏಳ್ಗೆ; ಬಿಜೆಪಿ ವಿರುದ್ಧ ಡಾ.ಅಂಜಲಿ ವಾಗ್ದಾಳಿ

300x250 AD

ಬಿಜೆಪಿಯರಿಂದ ಅಂಬಾನಿ-ಅಧಾನಿ ಅಭಿವೃದ್ಧಿ | ಅತಿಕ್ರಮಣದಾರರ ಹೋರಾಟಕ್ಕೆ ಪರಿಹಾರಕ್ಕೆ ಆದ್ಯತೆ

ಯಲ್ಲಾಪುರ: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರು, ಮಹಿಳೆಯರು, ಯುವಜನರಿಗೆ ಅನುಕೂಲವಾಗಿದೆ. ಆದರೆ ಕೇಂದ್ರ ಸರ್ಕಾರದ ಯೋಜನೆಗಳಿಂದ ಕೇವಲ ಅದಾನಿ, ಅಂಬಾನಿಗೆ ಲಾಭವಾಗಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹರಿಹಾಯ್ದರು.

ಇಲ್ಲಿನ ಎಪಿಎಂಸಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಹತ್ತು ತಿಂಗಳು ಪೂರೈಸಿದೆ. ಚುನಾವಣಾ ಪೂರ್ವ ನೀಡಿದ್ದ ಐದು ಗ್ಯಾರಂಟಿ ಭರವಸೆಯನ್ನ ಈಡೇರಿಸಿ ನುಡಿದಂತೆ ನಡೆವ ಸರ್ಕಾರ ಎಂದೆನಿಸಿಕೊಂಡಿದ್ದೇವೆ. ಆದರೆ ಕೇಂದ್ರದಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ ಬಿಜೆಪಿ, ಅಗತ್ಯ ವಸ್ತುಗಳ ಮೇಲೂ ಜಿಎಸ್‌ಟಿ ಹೇರಿ ಬೆಲೆ ಏರಿಕೆಗೆ ಕಾರಣವಾಗಿದೆ ಎಂದ ಅವರು, ಬಿಜೆಪಿ ಅಭ್ಯರ್ಥಿಗಳು ಜನರಿಗೆ ತಮ್ಮ ಮುಖ ತೋರಿಸಲೂ ಹಿಂಜರಿಯುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ‘ನನ್ನನ್ನು ನೋಡಬೇಡಿ, ಮೋದಿಗಾಗಿ ಮತ ಹಾಕಿ’ ಅನ್ನುತ್ತಿದ್ದಾರೆ. ಹಾಗಿದ್ದಲ್ಲಿ ಎಲ್ಲ ಕ್ಷೇತ್ರಗಳಿಗೂ ಮೋದಿಯವರನ್ನೇ ಸ್ಪರ್ಧೆಗೆ ನಿಲ್ಲಿಸಬಹುದಲ್ಲ ಎಂದು ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಪಂಚ ನ್ಯಾಯ ಘೋಷಿಸಿದ್ದೇವೆ. ರಾಜ್ಯದ ಗ್ಯಾರಂಟಿಯಂತೆ ಅದನ್ನೂ ಈಡೇರಿಸುತ್ತೇವೆ. ಬಿಜೆಪಿಯವರಿಗೆ ಆರು ಬಾರಿ, ಅಂದರೆ ಅರ್ಧ ಆಯಸ್ಸು ಸಂಸದರನ್ನಾಗಿ ಮಾಡಿದ್ದೀರಿ. ಈಗ ನನಗೆ ಒಂದು ಅವಕಾಶ ನೀಡಿ, ನಂತರ ಕ್ಷೇತ್ರದ ಅಭಿವೃದ್ಧಿ ನೋಡಿ. ಮೊದಲ ಅಧಿವೇಶನದಲ್ಲಿಯೇ ಅತಿಕ್ರಮಣದಾರರ ಸಮಸ್ಯೆಗೆ ಪರಿಹಾರ ಕೊಡಿಸಲು ಪ್ರಯತ್ನಿಸುವೆ. ಅದಕ್ಕಾಗಿ ಜಾತಿ- ಧರ್ಮ ಹೊರತಾಗಿ‌ ಮತ ನೀಡಿ ಎಂದು ಮನವಿ ಮಾಡಿದರು.

300x250 AD

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, 30 ವರ್ಷವನ್ನ ಈಗಾಗಲೇ ನಾವು ಕಳೆದುಕೊಂಡಿದ್ದೇವೆ. ಅಭಿವೃದ್ಧಿಯಲ್ಲ, ಹಿನ್ನಡೆ ಅನುಭವಿಸಿದ್ದೇವೆ. ಬಡವರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿ ರಾಜಕಾರಣ ಮಾಡುತ್ತಿದ್ದಾರೆ. ಅವರ ಸುಳ್ಳಿಗೆ ಬಲಿಯಾಗಿ ಬದಲಾಗಬೇಡಿ. ಗ್ಯಾರಂಟಿ ಕಾರ್ಡ್ ತೋರಿಸಿ ಅಧಿಕಾರಕ್ಕೆ ಬಂದಿದ್ದೇವೆ. ಈಗ ಅದನ್ನು ಈಡೇರಿಸಿದ್ದೇವೆ. ಅದರ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ಅತಿಕ್ರಮಣ ಸಮಸ್ಯೆ ಪರಿಹಾರಕ್ಕೆ 30 ವರ್ಷದಿಂದ ಒಮ್ಮೇಯೂ ಸಂಸದರ ಧ್ವನಿ ಕೇಳಲಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಮತಯಾಚನೆಗೆ ಇಳಿಯುವ ಪೂರ್ವ ಕೇಂದ್ರ ಸರ್ಕಾರದ ಯಾವ ಯೋಜನೆ ತಂದು ಜನರಿಗೆ ಉಪಕಾರ ಮಾಡಿದ್ದಾರೆ ಎಂಬುದನ್ನ ಬಿಜೆಪಿಗರು ಅವರಿಗೆ ಅವರೇ ಕೇಳಿಕೊಳ್ಳಬೇಕು. ಅಂಕೋಲಾ- ಹುಬ್ಬಳ್ಳಿ ರೈಲು ಯೋಜನೆ ಸರ್ವೆ ಆಗಿದ್ದರೂ ಯಾಕೆ ಅನುಷ್ಠಾನಕ್ಕೆ ತಂದಿಲ್ಲ? ಯಾವ ದೊಡ್ಡ ಯೋಜನೆ ಜಿಲ್ಲೆಗೆ ಬಂದಿದೆ? ಕ್ಷೇತ್ರದಲ್ಲಿ ಮೂಲಸೌಕರ್ಯದ ಅಭಿವೃದ್ಧಿಯಾಗಿಲ್ಲ. ಅದಕ್ಕಾಗಿ ಪ್ರಯತ್ನವನ್ನೂ ಮಾಡಿಲ್ಲ. ಜನಪ್ರತಿನಿಧಿಯಾದ ಮೇಲೆ ಅಭಿವೃದ್ಧಿಯ ಚಿಂತನೆ ಮಾಡಲೇಬೇಕಲ್ಲವೇ? ಕ್ಷೇತ್ರದ ಅಭಿವೃದ್ಧಿ ಮತದಾರರ ಅಪೇಕ್ಷೆ ಕೂಡ. ಜವಾಬ್ದಾರಿ ಹೇಗೆ ನಿಭಾಯಿಸಿದ್ದಾರೆ ಎನ್ನುವುದನ್ನು ಅರಿತರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೇ ಖಂಡಿತಾ ಮತ ಚಲಾಯಿಸುತ್ತೀರಿ ಎಂದ ಅವರು, ಬಿಜೆಪಿಗರು ಸುಳ್ಳು ಹೇಳಿ ಮತದಾರರಿಗೆ ತಪ್ಪು ದಾರಿಗೆ ಎಳೆದು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಪಾಠ ಕಲಿಸಬೇಕೊ ಬೇಡವೋ ಅನ್ನುವುದನ್ನು ಮತದಾರರು ತೀರ್ಮಾನಿಸಬೇಕು. ಕಾಂಗ್ರಸ್ ಸರಕಾರದಲ್ಲಿ ಸಾಮಾಜಿಕ‌ ನ್ಯಾಯವೂ‌ ಆಗುತ್ತಿದೆ. ಅಭಿವೃದ್ಧಿಯೂ ಆಗುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಜನರಿಗೆ ಅಭಿವೃದ್ಧಿ ಆಗಲಿದೆ. ಜವಾಬ್ದಾರಿ ಸ್ಥಾನದಲ್ಲಿದ್ದಾಗ ಅಭಿವೃದ್ಧಿಯ ಚಿಂತನೆ ನಡೆಸಬೇಕು. ಅಂದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ರವಿ ಭಟ್ಟ ಬರಗದ್ದೆ ಪಕ್ಷ ಸೇರ್ಪಡೆಯಾದವರ ಯಾದಿ ಓದಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಮಾಜಿ ಶಾಸಕ ವಿ.ಎಸ್.ಪಾಟೀಲ್, ಯುವ ಧುರೀಣ ವಿವೇಕ ಹೆಬ್ಬಾರ, ಪ್ರಮುಖರಾದ ಎನ್.ಕೆ.ಭಟ್ಟ ಮೆಣಸುಪಾಲ್, ಶ್ರೀನಿವಾಸ ಧಾತ್ರಿ, ಸಿ.ಎಸ್.ಗೌಡ, ಮುನಾಫ ಮಿರ್ಜಾನಕರ್ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top