ಬಿಜೆಪಿ ಸರಕಾರದಲ್ಲಿ ಬಚಾವ್ ಆಗಿದ್ದ ಮೀನುಗಾರರಿಗೆ ಕಾಂಗ್ರೆಸ್ ಸರಕಾರದಲ್ಲಿ ನೆಲೆ ಕಳೆದುಕೊಳ್ಳುವ ಸಂಕಷ್ಟ !
ಹೊನ್ನಾವರ : ಕಾಸರಕೋಡ ವಾಣಿಜ್ಯ ಬಂದರು ಕಾಮಗಾರಿ, ಮುಗಿಯದ ಅದ್ಯಾಯ ಅನ್ನುವಂತಾಗಿದೆ. ಕಾಮಗಾರಿ ಅಧಿಕೃತ ಪ್ರಾರಂಭಗೊಳ್ಳುವ ತನಕ ಈ ಗೊಂದಲ ಮುಂದುವರೆಯಲಿದೆ. ಇದೀಗ 144 ಸೆಕ್ಷನ್ ಜಾರಿ ಮಾಡಿ ರಸ್ತೆ ಕೆಲಸ ಪ್ರಾರಂಭ ಮಾಡುವ ಕ್ಷಣಗಣನೆಯಲ್ಲಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಂದರು ಕೆಲಸಕ್ಕೂ ಕೈ ಹಚ್ಚಿರುವುದು, ಯಾವುದೋ ಒಂದು ಗಣಿತದ ಲೆಕ್ಕ ಹಾಕಿದಂತಿದೆ.
ಕಾಸರಕೋಡ ವಾಣಿಜ್ಯ ಬಂದರು ನಿರ್ಮಾಣ ಹಲವು ವರ್ಷದ ಕನಸು, ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದ ಸಮಯದಲ್ಲಿ ಈ ಯೋಜನೆಯ ಕೆಲಸಕ್ಕೆ ನಾಂದಿ ಹಾಡಲಾಗಿತ್ತು. ಸಮ್ಮಿಶ್ರ ಸರಕಾರದಲ್ಲಿ ಪ್ರಸ್ತಾಪ ಬಂದಿರಲಿಲ್ಲ, ಮುಂದೆ ಬಿಜೆಪಿ ಸರಕಾರದಲ್ಲಿ ಕೆಲಸ ಪ್ರಾರಂಭ ಮಾಡುವ ವೇಗ ಹೆಚ್ಚಾಗಿತ್ತು. ಗುತ್ತಿಗೆ ಪಡೆದ ಎಚ್ ಪಿ ಪಿ ಎಲ್ ಕಂಪನಿಯಿಂದ ಸ್ಥಳೀಯರೋಬ್ಬರಿಗೆ ಸಬ್ ಗುತ್ತಿಗೆ ನೀಡಲಾಗಿತ್ತು. ಕೆಲಸ ಪ್ರಾರಂಭ ಮಾಡುವ ಧಾವಂತದಲ್ಲಿ ಕೆಲವೊಂದಿಷ್ಟು ಗಲಾಟೆ ಕೂಡ ನಡೆದಿತ್ತು. ಅನೇಕ ಬಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಾಮಗಾರಿ ಪ್ರಾರಂಭಕ್ಕೆ ವಿಪರೀತ ಪ್ರಯತ್ನ ನಡೆದಿತ್ತು. ಮೀನುಗಾರರ ಒಗ್ಗಟ್ಟಿನ ಹೋರಾಟ ಅಷ್ಟು ಸುಲಭವಾಗಿ ಕಾಮಗಾರಿ ಪ್ರಾರಂಭ ಮಾಡಲು ಸಾಧ್ಯವಾಗಿರಲಿಲ್ಲ. ಸ್ಥಳಕ್ಕೆ ಬಂದಿದ್ದ ಯಂತ್ರೋಪಕರಣವನ್ನು ವಾಪಾಸ್ ಕಳುಹಿಸಿ ಕೊಡುವಲ್ಲಿ ಸ್ಥಳೀಯರು ಯಶಸ್ಸು ಕಂಡಿದ್ದರು.
ಅಂದಿನ ವಿರೋಧ ಪಕ್ಷ ಕಾಂಗ್ರೆಸ್ ಮೀನುಗಾರರಿಗೆ ಬೆಂಗಾವಲಾಗಿ ನಿಂತಿತ್ತು. ಕಾಂಗ್ರೆಸ್ ರಾಜ್ಯಾಧ್ಯಕ್ಷರು ಬಂದು ನಾನಿದ್ದೇನೆ ಎಂದು ಮೀನುಗಾರರ ಬೆನ್ನು ತಟ್ಟಿ ಹೋಗಿದ್ದರು. ನಂತರ ಮೀನುಗಾರರ ಕೈ ಹಿಡಿದಿದ್ದು ನ್ಯಾಯಾಲಯದ ಹೋರಾಟ ಮಾತ್ರ ಆಗಿತ್ತು. ಒಂದಿಷ್ಟು ತಿಂಗಳು ನ್ಯಾಯಾಲಯದ ಹೋರಾಟದ ಕಾರಣಕ್ಕೆ ಕೆಲಸ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಬಂದರು ಕೆಲಸಕ್ಕೆ ಚಾಲನೆ ಸಿಗುವ ಸಾಧ್ಯತೆಯತ್ತ ಬೆಟ್ಟು ತೋರುತ್ತಿದೆ. ಜಿಲ್ಲಾಧಿಕಾರಿಯವರು ಬಂದರು ನಿರ್ಮಾಣಕ್ಕೆ ಸಹಕಾರ ಕೊಡಿ ಅನ್ನುವ ನಿಟ್ಟಿನಲ್ಲಿ ಮೀನುಗಾರರಲ್ಲಿ ಮನವಿ ಮಾಡಿದ್ದಾರೆ.
ಇನ್ನೂ ಬಿಜೆಪಿ ಅವಧಿಯಲ್ಲಿ ಕಿರುಕುಳ ಅನುಭವಿಸಿದರು, ಕೆಲಸ ಪ್ರಾರಂಭವಾಗದೆ ಬಚಾವ್ ಆಗಿದ್ದ ಮೀನುಗಾರರಿಗೆ, ಅಂದು ಅಭಯ ನೀಡಿದ್ದ ಕಾಂಗ್ರೆಸ್ ಅವಧಿಯಲ್ಲಿಯೇ ಇಂದು ಬಂದರು ಕೆಲಸ ಪ್ರಾರಂಭಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕಾಸರಕೋಡ ಬಂದರು ಕಾಮಗಾರಿಗೆ ಚಾಲನೆ ನೀಡಿದ್ದೆ ಕಾಂಗ್ರೆಸ್ ಆಗಿತ್ತು, ಬಹುಷ್ಯ ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಇಂಗಿತ ಇಟ್ಟುಕೊಂಡೆ ಹೆಜ್ಜೆ ಇಟ್ಟಿದಂತಿದೆ. ಚುನಾವಣೆ ಬಹಿಷ್ಕಾರ ಅಂದರು ಡೋಂಟ್ ಕೇರ್ ಎಂದು 144 ಜಾರಿ ಮಾಡಿ ಕೆಲಸ ಪ್ರಾರಂಭಕ್ಕೆ ಹಸಿರು ನಿಸಾನೆ ತೋರಿದೆ. ಒಂದು ಹಂತದಲ್ಲಿ ಸರ್ವೇ ಮಾಡಿ, ಗಡಿ ಗುರುತಿಸಿ ಆಗಿದೆ. ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡೆ ಈ ಬಾರಿ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ.
ಆಶ್ಚರ್ಯ ಅನ್ನುವಂತೆ ಪ್ರಾರಂಭದಲ್ಲೆ ಮಂಗಳೂರು ಕಡೆಯವರು ಎನ್ನಲಾದ ಖಾಸಗಿ ವ್ಯಕ್ತಿಗಳು ಬಂದು ಕೆಲಸ ಪ್ರಾರಂಭ ಮಾಡುವ ಪ್ರಯತ್ನ ಮಾಡಿದ್ದು, ರೌಡಿಸಂ ಮಾಡಿದ್ದಾರೆ ಎಂದು ಜಾಲತಾಣದಲ್ಲಿ ಸುದ್ದಿ ಹಬ್ಬಿದ್ದು, ಕಂಪನಿಗೆ ಹಿನ್ನಡೆ ಉಂಟು ಮಾಡಿತ್ತು. ಅದರಲ್ಲೂ ಬಂದಂತವರು ರಾಷ್ಟ್ರೀಯ ಪಕ್ಷವೊಂದರ ಯುವ ಮುಖಂಡನ ಕಡೆಯವರು, ಆ ಮುಖಂಡ ಯಾರ ಶಿಷ್ಯ ಅಂತ ನೋಡ ಹೊರಟರೆ, ಈ ಬಾರಿ ಬಂದರು ಕೆಲಸ ಪ್ರಾರಂಭದಲ್ಲಿ ಗಣಿತದ ಲೆಕ್ಕ ತಪ್ಪುವಂತಿಲ್ಲ ಎನ್ನುವ ಲೆಕ್ಕಾಚಾರದ ಮಾತು ಕೇಳಿ ಬಂದಿತ್ತು.
ಇದರ ಜೊತೆಗೆ ಬಂದರು ಕಾಮಗಾರಿ ಪ್ರಾರಂಭವಾದಲ್ಲಿ ಒಂದಿಷ್ಟು ನಿರೀಕ್ಷೆಯನ್ನು ಕೆಲವರು ಇಟ್ಟುಕೊಂಡಂತಿದೆ. ಅದರ ಸಂಪೂರ್ಣ ಲಾಭ ಪಡೆಯುವ ಕೆಲವರ ಆಲೋಚನೆ ಒಳಗೊಳಗೆ ನಡೆದಂತಿದೆ. ಹಲವು ಬಗೆಯ ಕೆಲಸಕಾರ್ಯದಲ್ಲಿ ತೊಡಗಿಕೊಳ್ಳಲು ಅವಕಾಶ ಇರುವುದರಿಂದ ಕೆಲವರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಂತೆ ಇದೆ.
ಕಳೆದ ವರ್ಷ ಕಡಲ ತೀರದ ಅಭಿವೃದ್ಧಿ ನಿಷೇಧಿತ ಮರಳು ತೀರದಲ್ಲಿ (ಹೈಟೈಡ್ ಲೈನ್) ನಿಯಮಬಾಹೀರವಾಗಿ ಕಲ್ಲು ಮಣ್ಣು ಸುರಿದು ಹೊಸದಾಗಿ ಕಚ್ಚಾ ರಸ್ತೆ ನಿರ್ಮಿಸಿರುವಲ್ಲಿ ಸೋಮವಾರ ಸಂಜೆಯನಂತರ ಜಲ್ಲಿ ಕಲ್ಲುಗಳನ್ನು ಸುರಿದು ಡಾಂಬರೀಕರಣ ನಡೆಸಲು ಪೋಲೀಸ್ ಸರ್ಪಗಾವಲಿನಲ್ಲಿ ಸಿಧ್ಧತೆ ನಡೆದಿದೆ. hppl ನವರಿಗೆ ನೀಡಿರುವ 93 ಎಕರೆ ಪ್ರದೇಶದ ಗಡಿಯ ಹೊರಗೆಯು ಸಹ ಕಡಲತೀರದಲ್ಲಿ ಇರುವ ಆಮೆಗಳ ಗೂಡುಗಳಿಗೆ ಹೊಂದಿಕೊಂಡಂತೆ ಅಲ್ಲಲ್ಲಿ ಹೊಸದಾಗಿ ಇನ್ನಷ್ಟು ಮಣ್ಣು ಸುರಿದು ಜಲ್ಲಿಕಲ್ಲನ್ನು ಹಾಸಿ ಡಾಂಬರೀಕರಣ ಕಾಮಗಾರಿ ನಡೆಸಲು ಸಿದ್ಧತೆ ನಡೆದಿರುವುದು ಕಂಡು ಬಂದಿದೆ.
ಸ್ಥಳಿಯ ಗ್ರಾಮ ಪಂಚಾಯಿತಿಯವರು ಕಡಲತೀರದಲ್ಲಿ ಉದ್ದೇಶಿತ ರಸ್ತೆ ಕಾಮಗಾರಿಯ ಅನುದಾನ ಮತ್ತು ಟೆಂಡರ್ ವಿವರಕೇಳಿರುವುದು ಹಾಗೂ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪಂಚಾಯತ ಪರವಾನಗಿ ಪಡೆಯದೇ ನಿರ್ಮಾಣ ಕಾಮಗಾರಿ ನಡೆಸದಂತೆ ಸೋಮವಾರ ಬಂದರು ಇಲಾಖೆಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಮೀನುಗಾರರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು ಮುಂದಿನ ಬೆಳವಣಿಗೆಗಳನ್ನು ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲದ ಬೂದಿ ಮುಚ್ಚಿದ ಕೆಂಡದಂಥ ಶಾಂತ ಸ್ಥಿತಿ ಸದ್ಯದ ಮಟ್ಟಿಗೆ ಇದೆ.