ಹೊನ್ನಾವರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಮಯ ಓದಿಗೆ ಪ್ರಾಮುಖ್ಯತೆ ಕೊಡುವುದರ ಜೊತೆಜೊತೆಯಲ್ಲಿ ದೇಶ ಪ್ರೇಮ ಬೆಳೆಸಿಕೊಳ್ಳುವುದು ತೀರಾ ಅಗತ್ಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ದೇಶ ಇಂದು ಜಾತಿ, ಧರ್ಮದ ಹೆಸರಿನಲ್ಲಿ ನಲುಗುತ್ತಿದ್ದು, ವಿದ್ಯಾರ್ಥಿಗಳು ಇಂತಹ ಯಾವುದೇ ಕೆಟ್ಟ ವಿಚಾರಗಳನ್ನು ತಲೆಗಂಟಿಸಿಕೊಳ್ಳದೇ, ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶ ಕಟ್ಟುವ ವಿಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು. ಅವರು ಶನಿವಾರ ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಮದ ಪಳ್ಳಿಕೇರಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ರಾಜ್ಯ ಸರಕಾರ ವಿದ್ಯಾರ್ಥಿಗಳ ಏಳ್ಗೆಗಾಗಿ ಅನೇಕ ಜನಪರ ಗ್ಯಾರಂಟಿಗಳನ್ನು ಜಾರಿಯಲ್ಲಿ ತಂದಿದ್ದು, ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಮುಂದೆ ಬರುವಂತೆ ವಿದ್ಯಾರ್ಥಿಗಳಿಗೆ ಒತ್ತಾಯಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಳದೀಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ್ ಮಾತನಾಡಿ ಇಂದಿನ ವಿದ್ಯಾರ್ಥಿಗಳೇ ಮುಂದಿನ ಭವಿಷ್ಯದ ನಾಯಕರು. ನನ್ನ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅತ್ಯಂತ ಹಳೆಯ ಈ ಉರ್ದು ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರು ಇಂದು ದೇಶ-ವಿದೇಶದಲ್ಲಿ ಉತ್ತಮ ಉದ್ಯೋಗದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.ಅಷ್ಟೆ ಅಲ್ಲದೇ ಅಂತಹ ಹಳೆ ವಿದ್ಯಾರ್ಥಿಗಳು ಇಂದಿಗೂ ತಾವು ಕಲಿತ ಶಾಲೆಯನ್ನು ಮರೆಯದೇ,ತಮ್ಮ ಕೈಯಲ್ಲಾದ ಸಹಾಯ, ಸಹಕಾರ ನೀಡುತ್ತಾ ಶಾಲೆಯನ್ನು ಪಾಲಿಸಿ ಪೋಷಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಅನೇಕ ಪ್ರತಿಭಾವಂತ ಮತ್ತು ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಾಬಾಲ್ ಮೈದಿನ್ ಶಹಾ, ಜಕ್ರಿಯ್ಯಾ ಶೇಖ, ಶಫಿವುಲ್ಲಾ ಸಾಬ್, ಸಂಶಿರ ಶಹಾ, ಪಂಚಾಯತ್ ಸದಸ್ಯರಾದ ಸಂಶಿರ ಖಾನ, ಶ್ರೀಮತಿ ಸಾಹಿರಾ ಭಾನು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಪಕ ಕಲೀಲ್ ಪಕೀರ್ ಅಹಮದ್ ಸ್ವಾಗತಿಸಿದರು. ಕನ್ನಡ ಶಿಕ್ಷಕರಾದ ಕೆ.ಎನ್.ನಾಯ್ಕ ಕೊನೆಯಲ್ಲಿ ವಂದಿಸಿದರು.