ಶಿರಸಿ: ತಾಲೂಕಾ ಗ್ರಾಮೀಣ ವಿಭಾಗದ ಆರ್ಯ, ಈಡಿಗ ನಾಮಧಾರಿ ಬಿಲ್ಲವ ಸಮಾಜ ಬಾಂಧವರಿಂದ ಜ.28, ರವಿವಾರದಂದು ದೇವನಳ್ಳಿ ಸುಂಡಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಸನ್ಮಾನ್ಯ ಸಚಿವರು ಮತ್ತು ಶಾಸಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕುಲಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮಿಗಳು ಶ್ರೀರಾಮ ಕ್ಷೇತ್ರ, ಉಜಿರೆ ಹಾಗೂ ಶ್ರೀ ಕಲ್ಯಾಣ ಸ್ವಾಮಿಗಳು, ಅಂಡಗಿಮಠ ಇವರ ದಿವ್ಯ ಸಾನಿಧ್ಯದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ನಿಮಿತ್ತ ಅಂದು ಬೆಳಿಗ್ಗೆ 9-30 ಗಂಟೆಗೆ ದೇವನಳ್ಳಿಯಿಂದ ಕಾರ್ಯಕ್ರಮ ನಡೆಯುವ ಸ್ಥಳ ಸುಂಡಳ್ಳಿಯವರೆಗೆ ಪೂರ್ಣಕುಂಭ ಮೇಳದೊಂದಿಗೆ ಕುಲಗುರುಗಳ ಭವ್ಯ ಮೆರವಣಿಗೆ ಇರುತ್ತದೆ. ಬೆಳಿಗ್ಗೆ 11-00 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗುರುಗಳ ಪಾದಪೂಜೆ ಇರುತ್ತದೆ. ತದನಂತರ ಬೆಳಿಗ್ಗೆ 11-30 ರಿಂದ ಸಭಾ ಕಾರ್ಯಕ್ರಮಗಳು ಜರುಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಸಕ ಭೀಮಣ್ಣ ನಾಯ್ಕ ಆಗಮಿಸಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಗೌರವ ಅತಿಥಿಗಳಾಗಿ ಮಾಜಿ ಶಾಸಕ ಸುನೀಲ ಬಿ. ನಾಯ್ಕ, ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ, ಟಿ.ಎಸ್.ಎಸ್. ಶಿರಸಿ ಅಧ್ಯಕ್ಷ ಗೋಪಾಲಕೃಷ್ಣ ವಿ. ವೈದ್ಯ ಮತ್ತಿಘಟ್ಟ, ಉದ್ಯಮಿ ಶಂಕರ ನಾಗೇಶ ದಿವೇಕರ, ರಾಜಕೀಯ ಮುಖಂಡ ಸೂರಜ ನಾಯ್ಕ ಸೋನಿ, ಕುಮಟಾ, ಆರ್ಯ ಈಡಿಗ ನಾಮಧಾರಿ ಬಿಲ್ಲವ ಸಮಾಜ ನಗರ ಘಟಕ ಅಧ್ಯಕ್ಷ ಗಣಪತಿ ಆರ್. ನಾಯ್ಕ, ಗುರುವಂದನಾ ಸಮಿತಿ ಅಧ್ಯಕ್ಷ ಸುರೇಶ ಗಣಪತಿ ನಾಯ್ಕ, ಸುಂಡಳ್ಳಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಿಂದ ಆಶೀರ್ವಚನ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆಯ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 7-00 ಗಂಟೆಯಿಂದ 9-00 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 9-00 ರಿಂದ 12-00 ರವರೆಗೆ “ಮಹಿಷಾಸುರ ಮರ್ಧಿನಿ” ಯಕ್ಷಗಾನ ಕಾರ್ಯಕ್ರಮವು ನಡೆಯಲಿದೆ. ಕಾರಣ ಎಲ್ಲ ಸಮಸ್ತ ಸಮಾಜ ಬಾಂಧವರು, ಊರ ನಾಗರಿಕರು ತಮ್ಮ ಕುಟುಂಬ ಸಮೇತರಾಗಿ ಅಪಾರ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ಕೋರಿರುತ್ತಾರೆ.