ಹೊನ್ನಾವರ : ಖ್ಯಾತ ಗಣಿತ ಶಿಕ್ಷಕ ಎಚ್.ಎನ್.ಪೈ ಅಭಿನಂದನಾ ಸಮಾರಂಭದ ಪೂರ್ವಭಾವಿಯಾಗಿ, ಎಚ್.ಎನ್.ಪೈ ಗುರುವಂದನಾ ಸಮಿತಿ ಹಳದೀಪುರ, ಶ್ರೀರಾಮಚಂದ್ರಾಪುರ ಮಠ ಹೊಸನಗರದ ಸೇವಾಖಂಡದ ಯೋಗಕ್ಷೇಮ ವಿಭಾಗ, ಹಾಗೂ ಸೂರತ್ಕಲ್ ನ ಶ್ರೀನಿವಾಸ ಆಸ್ಪತ್ರೆ ಇವರು ಜಂಟಿಯಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರ ಅಗ್ರಹಾರದ ಶ್ರೀ ಮಹಾಗಣಪತಿ ದೇವಾಲಯದ ಆವಾರದಲ್ಲಿ ಸಂಪನ್ನವಾಯಿತು.
ಜ.21 ರಂದು ನಡೆಯಲಿರುವ ಖ್ಯಾತ ಗಣಿತ ಶಿಕ್ಷಕ ಎಚ್.ಎನ್.ಪೈ ಅಭಿನಂದನಾ ಸಮಾರಂಭದ ಮೊದಲ ಸಾಮಾಜಿಕ ಕಾರ್ಯದ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಡಾ.ಕೆ. ಸುಬ್ರಹ್ಮಣ್ಯಂ (ಹೃದ್ರೋಗ ತಜ್ಞರು), ಡಾ. ಶಶಿರಾಜ ಕೆ. ಶೆಟ್ಟಿ (ಎಲುಬು, ಮೂಳೆ ತಜ್ಞರು) ಭಾಗವಹಿಸುವ ಜೊತೆಗೆ ಇತರ ಶಸ್ತ್ರ ಚಿಕಿತ್ಸೆ, ಕಣ್ಣಿನ ತಜ್ಞರು, ಕಿವಿ ಮತ್ತು ಮೂಗು ತಜ್ಞರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಸಾಮಾನ್ಯ ವೈದ್ಯಕೀಯ ತಜ್ಞರು ಇವರುಗಳು ಅಗತ್ಯ ಆರೈಕೆ ಹಾಗೂ ಮಾರ್ಗದರ್ಶನ ಮಾಡಿದರು.
ಇದೇ ಸಂದರ್ಭದಲ್ಲಿ ವೈದ್ಯರು ಸೂಚಿಸಿದವರಿಗೆ ರಕ್ತದ ಒತ್ತಡ ಮತ್ತು ಮಧುಮೇಹ ಪರೀಕ್ಷೆ ಹಾಗೂ ಇ.ಸಿ.ಜಿ. ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು. ಜೊತೆಗೆ ಶಿಬಿರದಲ್ಲಿ ಜನರಲ್ ಮೆಡಿಸನ್, ಶ್ವಾಸಕೋಶ ಸಂಬಂಧಿ ಖಾಯಿಲೆಗಳು, ಹೃದಯರೋಗ, ಶಸ್ತ್ರ ಚಿಕಿತ್ಸೆ ವಿಭಾಗ, ಚರ್ಮರೋಗ ಚಿಕಿತ್ಸೆ, ಅಪೆಂಡಿಕ್ಸ್ ಅಲ್ಸರ್, ಥೈರಾಯಿಡ್ ಹರ್ನಿಯಾ ಚಿಕಿತ್ಸೆ, ಗರ್ಭಕೋಶದ ಗಡ್ಡೆ, ಮೂಲವ್ಯಾಧಿ ಸಂಧಿವಾತ, ಉದರ ಸಂಬಂಧಿ ಖಾಯಿಲೆ, ವೆರಿಕೋಸ್ ವೇನ್, ನರ ಸಂಬಂಧಿ ಚಿಕಿತ್ಸೆಗಳ ತಪಾಸಣೆ ನಡೆಸಲಾಯಿತು. ಸುಮಾರು 300 ಕ್ಕೂ ಅಧಿಕ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದರು.
ಈ ಶಿಬಿರವನ್ನು ಎಚ್.ಎನ್ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು, ಡಾ. ಜಿ.ಜಿ ಸಭಾಹಿತ, ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ನಾಯ್ಕ, ಯೋಗ ಕ್ಷೇಮವಿಭಾಗದ ಸತೀಶ ಭಟ್ಟ, ಡಾ.ಕೆ. ಸುಬ್ರಹ್ಮಣ್ಯಂ, ಡಾ. ಶಶಿರಾಜ ಕೆ. ಶೆಟ್ಟಿ ಗುರುವಂದನಾ ಸಮಿತಿಯ ಮಂಜುನಾಥ ಭಟ್ಟ, ಹಾಗೂ ಗುರುವಂದನಾ ಸಮಿತಿಯ ಸದಸ್ಯರುಗಳು ಹಾಗೂ ಎಚ್.ಎನ್ ಪೈ ಅಭಿಮಾನಿಗಳು ಇದ್ದರು.