ಶಿರಸಿ: ನಗರದ ಯೋಗ ಮಂದಿರ ಸಭಾಭವನದಲ್ಲಿ ಪ್ರತಿ ತಿಂಗಳ ಮೊದಲ ಸೋಮವಾರದಂದು ಸ್ಥಳೀಯ ರಾಗಮಿತ್ರ ಪ್ರತಿಷ್ಠಾನದ ಗುರು ಅರ್ಪಣೆ ಮತ್ತು ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ಸಂಗೀತಾಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಗಾಯನದಲ್ಲಿ ಪಾಲ್ಗೊಂಡ ವಾರಣಾಸಿಯ ವಿದೂಷಿ ತೇಜಸ್ವಿನಿ ವೆರ್ಣೇಕರ ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ಆರಂಭದಲ್ಲಿ ರಾಗ್ ನಂದ್ ನ್ನು ವಿಸ್ತಾರವಾಗಿ ಹಾಡಿ ಸಭೆಯನ್ನು ಮಂತ್ರಮುಗ್ದಗೊಳಿಸಿದರು. ನಂತರದಲ್ಲಿ ಮೀರಾ ಭಜನ್ , ಕೊನೆಯಲ್ಲಿ ರಾಗ್ ಭೈರವಿಯಲ್ಲಿ ದೇವಿಸ್ತುತಿಯನ್ನು ಹಾಡಿ ಸಂಗೀತ ರಸದೂಟ ಬಡಿಸಿದರು. ವೆರ್ಣೇಕರ ಗಾನಕ್ಕೆ ತಬಲಾದಲ್ಲಿ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ ಹಾಗೂ ಹಾರ್ಮೋನಿಯಂನಲ್ಲಿ ಪ್ರಕಾಶ ಹೆಗಡೆ ಯಡಳ್ಳಿ ಸಮರ್ಥವಾಗಿ ಸಾಥ್ ನೀಡಿದರು. ಹಿನ್ನೆಲೆಯ ತಾನ್ಪುರಾದಲ್ಲಿ ಶಿಲ್ಪಾ ಮತ್ತು ಕಾವ್ಯ ಸಹಕರಿಸಿದರು.
ತೇಜಸ್ವಿನಿಯರ ಗಾಯನದ ಪೂರ್ವದಲ್ಲಿ ದ್ವಂದ್ವ ಗಾಯನದಲ್ಲಿ ಕಾವ್ಯ ಭಂಡಾರಿ, ಶಿಲ್ಪಾ ಭಂಡಾರಿಯವರು ಹಾಡುತ್ತ ಯುವ ಭರವಸೆಯ ಗಾಯಕಿಯರಾಗಿ ಪ್ರತಿಭೆ ಹೊರಹೊಮ್ಮಿಸಿದರು. ಈ ಗಾಯಕಿಯರ ದಂಧ್ವ ಗಾನ ಪೂರ್ವದಲ್ಲಿ ಶಿರಸಿ ಲಯನ್ಸ್ ಕ್ಲಬ್ ನ ಸದಸ್ಯೆಯರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಶ್ರುಶ್ರಾವ್ಯವಾಗಿ ನಡೆಯಲ್ಪಟ್ಟಿತು. ಮೇಲಿನ ಎರಡೂ ಕಾರ್ಯಕ್ರಮಕ್ಕೆ ತಬಲಾದಲ್ಲಿ ರಾಜೇಂದ್ರ ಭಾಗ್ವತ್ ಹೆಗ್ಗಾರ ಹಾಗೂ ಹಾರ್ಮೋನಿಯಂನಲ್ಲಿ ಉನ್ನತಿ ಕಾಮತ್ ಶಿರಸಿ ಸಾಥ್ ನೀಡಿದರು.
ಸಂಗೀತ ಕಾರ್ಯಕ್ರಮ ಪೂರ್ವದಲ್ಲಿ ದೀಪ ಬೆಳಗಿಸಿದ ಶಿರಸಿ ರಾಜದೀಪ ಟ್ರಸ್ಟ್ ಅಧ್ಯಕ್ಷ ದೀಪಕ ಹೆಗಡೆ ದೊಡ್ಡರೂ, ತೇಜಸ್ವಿನಿ ವೆರ್ಣೇಕರ ವಾರಣಾಸಿಯವರನ್ನು ಶಾಲು ಹೊದೆಸಿ, ಫಲ ಸಮರ್ಪಿಸಿ, ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಮಾತನಾಡುತ್ತ, ಎಲ್ಲ ಕಲಾ ಪ್ರಕಾರಗಳಿಗೂ ಸಂಗೀತ ಮೂಲವಾಗಿದ್ದು, ಇದೊಂದು ಅತ್ಯಂತ ಶ್ರೇಷ್ಠ ಕಲೆಯಾಗಿದೆ. ಇದನ್ನು ಅಭ್ಯಸಿಸುವುದು, ಆಲಿಸುವುದು ವ್ಯಕ್ತಿಗತವಾಗಿ ಜೀವನದಲ್ಲಿ ಹೊಸತನ, ಹುಮ್ಮಸ್ಸು ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಎಂದರು. ಅಧ್ಯಕ್ಷತೆಯನ್ನು ಸಂಗೀತಾಭಿಮಾನಿ ಆರ್.ಎನ್.ಭಟ್ಟ ಸುಗಾವಿ ವಹಿಸಿದ್ದರು. ರಾಗಮಿತ್ರ ಪ್ರತಿಷ್ಠಾನದ ಪ್ರಕಾಶ ಹೆಗಡೆ ಸ್ವಾಗತಿಸಿದರೆ, ಗಿರಿಧರ ಕಬ್ನಳ್ಳಿ ನಿರೂಪಿಸಿ, ವಂದಿಸಿದರು.