ಯಲ್ಲಾಪುರ: ಮಾದರಿ ಜೀವ ವೈವಿಧ್ಯತಾ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ವೃಕ್ಷಲಕ್ಷ ಅಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಅವರು ಬುಧವಾರ ಜೀವ ವೈವಿಧ್ಯತೆ ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಳೆದ ವರ್ಷದ ಏಳು ಲಕ್ಷ ರೂ. ಅನುದಾನ ಬಾಕಿ ಇದೆ. ಈಗಾಗಲೇ ಕೈಗೊಂಡ ಚಟುವಟಿಕೆಗಳ ದಾಖಲೀಕರಣ ಆಗಬೇಕಿದೆ. ಮುಂದಿನ ವರ್ಷದ ಕ್ರಿಯಾ ಯೋಜನೆ ಸಿದ್ಧಪಡಿಸಬೇಕಿದೆ. ಈ ವರ್ಷದ ಸಾಧಕರನ್ನು ಗುರುತಿಸುವ ಕಾರ್ಯಕ್ರಮ ಜನವರಿಯಲ್ಲಿ ಆಗಬೇಕು ಎಂದರು.
ತಾಲೂಕಿನ ಕಿರವತ್ತಿ ವ್ಯಾಪ್ತಿಯ ತೊಟ್ಟಿಲಗುಂಡಿಯ ಬೀಟೆಯ ಮರಕ್ಕೆ ಪಾರಂಪರಿಕ ವೃಕ್ಷ ಎನ್ನುವ ಮಾನ್ಯತೆ ಕೊಡಬೇಕು. ಅದನ್ನು ಜೇನು ಸಂರಕ್ಷಣೆ, ಕೃಷಿ ಹೈನೋದ್ಯಮದ ಮಾದರಿಯಲ್ಲಿ ಬೆಳೆಸುವ ಕೆಲಸ ಆಗಬೇಕು. ಕೆರೆ ಅತಿಕ್ರಮಣ ತೆರವುಗೊಳಿಸಿ ಗ್ರಾ ಪಂ ಗೆ ಹಸ್ತಾಂತರ ಮಾಡುವ ಕೆಲಸಕ್ಕೆ ವೇಗ ಸಿಗಬೇಕು. ತೋಟಗಾರಿಕೆ,ಜೀವ ವೈವಿಧ್ಯತೆ,ಸಾವಯವ ಕೃಷಿಯ ಬಗ್ಗೆ ಸರಕಾರ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಕಾರ್ಯಾಗಾರ ಮಾಡಬೇಕು.ಭೂಕುಸಿತಕ್ಕೆ ನೀಡುವ ಪರಿಹಾರ ಮಾನದಂಡ ಬದಲಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ತಾಪಂ ಆಡಳಿತಾಧಿಕಾರಿ ನಟರಾಜ ಟಿ.ಎಚ್, ಇಒ ಜಗದೀಶ್ ಕಮ್ಮಾರ ಇದ್ದರು.