ಅಂಕೋಲಾ : ಕೆನರಾ ವೆಲಫರ್ ಟ್ರಸ್ಟನ ಪಿ.ಎಂ. ಪ್ರೌಢಶಾಲೆ, ಪಿ.ಎಂ. ಆಂಗ್ಲ ಮಾಧ್ಯಮ ಹೈಸ್ಕೂಲ್, ಡಾ.ದಿನಕರ ದೇಸಾಯಿ ಸ್ಮಾರಕ ಪ್ರಾಥಮಿಕ ಶಾಲೆ ಹಾಗೂ ಪಿಎಂ ಸಮಾಜ ಸೇವಾ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಶಾಲೆಯ ಆವರಣದಲ್ಲಿ ನಡೆದ ಮಕ್ಕಳ ಸಂತೆ ವಿಶಿಷ್ಠವಾಗಿ ಗಮನ ಸೆಳೆಯಿತು.
ಮಕ್ಕಳೇ ಆಸಕ್ತಿಯಿಂದ ಮಾರಾಟ ಮಳಿಗೆಗಳನ್ನು ಇಟ್ಟು ವಿವಿಧ ಬಗೆಯ ಸಾಮಗ್ರಿಗಳನ್ನು ಮಾರಾಟ ಮಾಡಿ ಗಮನ ಸೆಳೆದರು. ಕೆನರಾ ವೆಲಫೇರ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಾನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಸಂತೆ ನಡೆಸುವುದರಿಂದ ಮಕ್ಕಳಲ್ಲಿ ವ್ಯವಹಾರದ ಕೌಶಲ್ಯ ಬೆಳೆಯುತ್ತದೆ. ಇದೂ ಕೂಡ ಶಿಕ್ಷಣದ ಒಂದು ಪೂರಕ ಅಂಶವಾಗಿದೆ. ಮಕ್ಕಳಿಗೆ ಉತ್ತಮ ಹೈಜೀನಿಕ್ ಆಹಾರದ ಅಂಶಗಳ ಬಗ್ಗೆ ಅರಿವು ಮೂಡಬೇಕು. ಪಾಲಕರೂ ಈ ಕುರಿತು ಗಮನ ಹರಿಸಬೇಕು ಎಂದರು.
ಮುಖ್ಯ ಅತಿಥಿಗಳಾದ ಕಾರವಾರದ ಮರೈನ್ ಬಯಾಲಜಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ ಎನ್ ನಾಯಕ ಮಾರಾಟಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಸಂತೆ ಕೇವಲ ಮನರಂಜನೆಗಾಗಿ ನಡೆಯುವುದಲ್ಲ, ಇದು ಹಲವು ಅನುಭವಗಳನ್ನು ನೀಡುತ್ತದೆ ವ್ಯವಹಾರ ನಡೆಸುವ ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಜಗದೀಶ ಖಾರ್ವಿ, ಪಿ ಎಂ ಸಮೂಹ ಸಂಸ್ಥೆಯ ಕೋ ಆರ್ಡಿನೇಟರ ಹಾಗೂ ಮುಖ್ಯಾಧ್ಯಾಪಕ ಚಂದ್ರಶೇಖರ ಕಡೆಮನೆ, ಆಂಗ್ಲ ಮಾದ್ಯಮ ಹೈಸ್ಕೂಲ್ ಮುಖ್ಯಾಧ್ಯಾಪಕಿ ಕೋಮಲ ಹಿರೇಮಠ, ಹಿರಿಯ ಶಿಕ್ಷಕಿ ಶೀಲಾ ಬಂಟ, ಪತ್ರಕರ್ತ ನಾಗರಾಜ ಜಾಂಬಳೇಕರ, ನಿರೀಕ್ಷಾ ಗೌಡ ಉಪಸ್ಥಿತರಿದ್ದು ವಿವಿಧ ಮಳಿಗೆಗಳನ್ನು ಉದ್ಘಾಟಿಸಿದರು. ಡಾ.ದಿನಕರ ದೇಸಾಯಿ ಪ್ರಾ.ಶಾಲೆಯ ಮುಖ್ಯಾಧ್ಯಾಪಕ ಸುಭಾಷ ಕೆ ನಾಯ್ಕ ವಂದಿಸಿದರು. ಶಿಕ್ಷಕ ಎನ್ ಸಿ ಸಿ ಕಮಾಂಡರ ಜಿ ಆರ್ ತಾಂಡೇಲ ಕಾರ್ಯಕ್ರಮ ನಿರ್ವಹಿಸಿದರು.
ಮಕ್ಕಳ ಸಂತೆಯಲ್ಲಿ ಸ್ಟೇಶನರಿ, ಕಾಸ್ಮೆಟಿಕ್, ಪಠ್ಯ ಪುಸ್ತಕ ಸಾಮಗ್ರಿ, ಹಣ್ಣುಗಳ ಮಳಿಗೆಗಳು, ಹೈಸ್ಕೂಲಿನ ಇಕೋಕ್ಲಬ್ ಅಡಿಯಲ್ಲಿ ಶಾಲೆಯಲ್ಲಿಯೇ ಬೆಳೆಸಿದ ತರಕಾರಿಗಳ ಮಳಿಗೆ, ಆಟದ ಮತ್ತು ಮಕ್ಕಳ ಆಟಿಕೆಯ ಸಾಮಗ್ರಿಗಳು, ಫಾಸ್ಟ ಫುಡ್, ಡ್ರೈ ಫುಡ್, ಫ್ರುಟ್ ಜ್ಯೂಸ್, ಬೇಕರಿ ಐಟಂ ಮತ್ತು ಐಸಕ್ರೀಂ, ಬಿರಿಯಾನಿ ಸ್ಟಾಲ್ ಇವುಗಳಲ್ಲಿ ಮಕ್ಕಳು ಭರ್ಜರಿ ವ್ಯಾಪಾರ ಮಾಡಿದರೆ ಪಾಲಕರು ಖರೀದಿಯಲ್ಲಿ ತೊಡಗಿದ್ದರು. ಇದರ ಹೊರತಾಗಿ ಮನರಂಜನೆಗಾಗಿ ಹಲವು ಫನ್ನಿ ಗೇಮ್ಸ್ ಸ್ಪರ್ಧೆಗಳನ್ನೂ ನಡೆಸಲಾಯಿತು. ಮಕ್ಕಳ ಸಂತೆಯಲ್ಲಿ ಸಂಸ್ಥೆಯ ಎಲ್ಲ ಶಿಕ್ಷಕ ಶಿಕ್ಷಕಿಯರು, ಸಿಬ್ಬಂದಿಗಳು ನೇತೃತ್ವ ವಹಿಸಿ ಮಕ್ಕಳ ಸಂತೆಗೆ ನೆರವಾದರು.
ಮಕ್ಕಳಿಗೆ ಪಾಲಕರು ಮನೆಯಲ್ಲೇ ತಿಂಡಿ ತಯಾರಿಸಿ ಕೊಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದು ಆರೋಗ್ಯಕ್ಕೆ ಉತ್ತಮ. ಮಕ್ಕಳ ಆರೋಗ್ಯವನ್ನು ಕಾಪಾಡಿ. ಆದಷ್ಟು ಬೀದಿ ಬದಿಯ ಆಹಾರ ಸೇವನೆ ಮಾಡುವದನ್ನು ಕಡಿಮೆ ಮಾಡಿ. ಭಾರತೀಯ ಸಾಂಪ್ರದಾಯಿಕ ಅಡಿಗೆ ಉತ್ತಮ ಆರೋಗ್ಯ ಕಲ್ಪಿಸುತ್ತದೆ.
ವಿ ಎನ್ ನಾಯಕ
ಮರೈನ್ ಬಯಾಲಜಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ.