ಭಟ್ಕಳ: ಚಿಕ್ಕಮಗಳೂರಿನಲ್ಲಿ ಯುವ ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಎಸಗಿದವರ ಮೇಲೆ ಸೂಕ್ತ ಕ್ರಮಕ್ಕಾಗಿ ಹಾಗೂ ವಕೀಲರ ರಕ್ಷಣಾ ಕಾಯ್ದೆ ಜ್ಯಾರಿಗೊಳಿಸುವ ಕುರಿತು ಭಟ್ಕಳ ವಕೀಲರ ಸಂಘದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.
ಚಿಕ್ಕಮಗಳೂರಿನ ಯುವ ವಕೀಲರಾದ ಪ್ರೀತಮ್ ಎಂ.ಟಿ. ಅವರನ್ನು ಕ್ಷುಲ್ಲಕ ಕಾರಣಕ್ಕಾಗಿ ಪೊಲೀಸ್ ಠಾಣೆಗೆ ಎಳೆದೊಯ್ದು ಅವರ ಮೇಲೆ ಅಮಾನುಷವಾಗಿ ಹಲ್ಲೆ ಎಸಗಿದ ಪೊಲೀಸ್ ಅಧಿಕಾರಿಗಳು, ಹಾಗೂ ಸಿಬ್ಬಂದಿಗಳನ್ನು ಈಗಾಗಲೇ ಅಮಾನತ್ತು ಮಾಡಿದ್ದು ತಕ್ಷಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಅವರನ್ನು ನಿರ್ದಾಕ್ಷಿಣ್ಯವಾಗಿ ಇಲಾಖೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ ಅವರು ರಾಜ್ಯದಲ್ಲಿ ವಕೀಲರು ಭಯದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದ್ದು, ವಕೀಲರಿಗೆ ಸೂಕ್ತ ರಕ್ಷಣೆ ಕೊಡುವ ಕುರಿತು ಮುಖ್ಯ ಮಂತ್ರಿಗಳು ವಕೀಲರ ರಕ್ಷಣಾ ಕಾಯ್ದೆಯನ್ನು ಜ್ಯಾರಿಗೊಳಿಸಬೇಕೆಂದು
ಒತ್ತಾಯಿಸಿದರು.
ಅಲ್ಲದೇ ವಕೀಲರಿಗೆ ಸೂಕ್ತ ಭದ್ರತೆಯನ್ನು ಒದಗಿಸುವರೇ ಸರಕಾರ ಮುಂದಾಗಬೇಕು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಕೀಲರೂ ಸಹ ತಮ್ಮ ಕೊಡುಗೆಯನ್ನು ನೀಡುತ್ತಿದ್ದು ಸರಕಾರ ಕೂಡಾ ನಮ್ಮ ಮನವಿಗೆ ಸ್ಪಂದಿಸಿ ಸಂಬಂಧ ಪಟ್ಟ ಪೊಲೀಸ್‌ರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಭಟ್ಕಳ ವಕೀಲರ ಸಂಘದ ಅಧ್ಯಕ್ಷ, ವಕೀಲ ಗಣೇಶ ದೇವಾಡಿಗ, ಉಪಾಧ್ಯಕ್ಷ ಪಾಂಡು ನಾಯ್ಕ, ಹಿರಿಯ ವಕೀಲ ಆರ್.ಆರ್. ಶ್ರೇಷ್ಠಿ, ಇಮ್ರಾನ ಲಂಕಾ, ಮಂಜುನಾಥ ಗೊಂಡ, ಮಹೇಶ ನಾಯ್ಕ, ಮಾಸ್ತಿ ನಾಯ್ಕ, ಸತೀಶ ನಾಯ್ಕ, ರಾಜೇಶ ನಾಯ್ಕ, ನಾಗರಾಜ ಇ.ಎಚ್., ಸೇರಿದಂತೆ ಮುಂತಾದ ವಕೀಲರು ಇದ್ದರು.