ಹಳಿಯಾಳ: ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ಹಗಲುವೇಷದ ನಾಟಕ ಮಾಡುತ್ತಾ, ರಾಜಕೀಯ ಚೆಲ್ಲಾಟವಾಡುತ್ತಿದ್ದಾರೆ. ರೈತರ ಸ್ಥಿತಿ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬರು ಶಾಂತಕುಮಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲಕ್ಕೆ ತುತ್ತಾಗಿರುವ ರೈತರ ಬವಣೆ ಅರಿತುಕೊಳ್ಳಲು ಅಧಿವೇಶನಕ್ಕೆ ಬರುವ ಎಂಎಲ್‌ಎ, ಮಂತ್ರಿಗಳು ಒಂದೊಂದು ದಿನ ಸುತ್ತಮುತ್ತಲ ರೈತರ ಮನೆಗಳಲ್ಲಿ ಉಳಿಯಲಿ; ರೈತರ ಸಂಕಷ್ಟ ಅರಿಯಲಿ. ವಿಶೇಷ ಅಧಿವೇಶನ ಎಂದು ಹಗಲುವೇಷದ ನಾಟಕ ಬಿಡಲಿ ಎಂದ ಅವರು, ಸಂಕಷ್ಟದಲ್ಲಿರುವ ರಾಜ್ಯದ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿ ಡಿ.23ರಂದು ರಾಷ್ಟ್ರೀಯ ಕಿಸಾನ್ ಮಹಾಪಂಚಾಯತ್ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದ 223 ತಾಲೂಕುಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿವೆ. ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಬೆಳೆ ಹಾನಿ, ಮಳೆಹಾನಿ, ಪ್ರವಾಹ ಹಾನಿಯಿಂದ ರೈತರು ತತ್ತರಿಸಿದ್ದಾರೆ. ಕೃಷಿ ಸಾಲ ಪಡೆದ ರೈತ ಸಾಲದ ಹಣವನ್ನು ವ್ಯವಸಾಯಕ್ಕೆ ಹೂಡಿಕೆ ಮಾಡಿ ಬೆಳೆ ನಾಶವಾಗಿದೆ. ಹಾಕಿದ ಹಣ ವಾಪಸ್ ಬಂದಿಲ್ಲ, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದ್ದರಿಂದ ರೈತನ ಸಂಪೂರ್ಣ ಸಾಲ ಮನ್ನವಾಗಬೇಕು ಎಂದು ಆಗ್ರಹಿಸಿದ್ದಾರೆ.